ರಾಜ್ಯದ ರೈತರು ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡುವ ಟನ್ ಕಬ್ಬಿಗೆ ₹ 4,500 ನಿಗದಿಪಡಿಸಬೇಕು, ರಂಗರಾಜನ್ ವರದಿಯಂತೆ ಉಪ ಉತ್ಪನ್ನಗಳ ಮೇಲಿನ ಲಾಭಾಂಶದಲ್ಲಿ ಕಬ್ಬು ಬೆಳೆಗಾರರಿಗೆ ಶೇ 70 ಲಾಭಾಂಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರೈತಸಂಘದ ರಾಜ್ಯಾಧ್ಯಕ್ಷ ಬಡಗನಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಘಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ರೈತಸಂಘದ ಕಾರ್ಯಕರ್ತರು ಕೇಂದ್ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಗಲು ವೇಳೆ 7 ತಾಸು ಕೃಷಿ ಪಂಪ್ ಸೆಟ್ ಗಳಿಗೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಗೃಹಬಳಕೆ ವಿದ್ಯುತ್ ಕನಿಷ್ಠ ಶುಲ್ಕವನ್ನು ಹೆಚ್ಚಳ ಮಾಡಿ ಏಕರೂಪ ದರ ನಿಗದಿ ಮಾಡಿರುವುದನ್ನ ತೆಗೆದು ಈ ಹಿಂದಿನ ಶುಲ್ಕ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕಬ್ಬು ದರ ನಿಗದಿಗೆ ಶೇ.10.25 ಇಳುವರಿ ಮಾನದಂಡ ದಡಿ ಅವೈಜ್ಞಾನಿಕವಾಗಿ ಟನ್ ಕಬ್ಬಿಗೆ 3150 ರೂ ನಿಗದಿ ಮಾಡಿರುವುದನ್ನು ಕೈ ಬಿಟ್ಟು ಶೇ 8.5 ಮಾನದಂಡ ನಿಗದಿ ಮಾಡಬೇಕು. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನಬದ್ಧ ಕಾನೂನು ರೂಪಿಸಬೇಕು, ಡಾ. ಎಂ ಎಸ್ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋದಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು, ಕೃಷಿ ಬೆಲೆ ಆಯೋಗಕ್ಕೆ ಶಾಸನಬದ್ಧ ಅಧಿಕಾರ ನೀಡಬೇಕು. ಅಲ್ಲದೇ ಮಂಡ್ಯ ಹಾಲು ಒಕ್ಕೂಟ ಹಾಲಿನ ಖರೀದಿ ದರ ಪ್ರತಿ ಲೀಟರ್ ಗೆ 1.75 ರೂ ಕಡಿತ ಮಾಡಿರುವುದನ್ನು ಹಿಂಪಡೆಯಬೇಕು, ಮೆಗಾ ಡೈರಿ ಹಗರಣದಲ್ಲಿ ನ್ಯಾಯಾಲಯದ ಆದೇಶದಂತೆ 72 ಕೋಟಿ ರೂ ವಸೂಲಿ ಮಾಡಲು ಸರ್ಕಾರ ನಿರ್ದೇಶನ ನೀಡಬೇಕು, ಹಾಲಿಗೆ ನೀರು ಬೆರೆಸಿ ಒಕ್ಕೂಟಕ್ಕೆ ನಷ್ಟ ಮಾಡಿರುವ ಹಗರಣ ಕುರಿತು ಸಿಬಿಐ ತನಿಖೆ ನಡೆಸಬೇಕು, ಭತ್ತ,ರಾಗಿ, ಕೊಬ್ಬರಿ ಖರೀದಿಗೆ ವರ್ಷಪೂರ್ತಿ ಕೇಂದ್ರ ತೆರೆಯಬೇಕು, ಮೂರು ಜಿಲ್ಲೆಗಳಲ್ಲಿ ನೀಡಲಾಗುತ್ತಿರುವ ಭತ್ತದ ಪ್ರೋತ್ಸಾಹಧನವನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎನ್.ಪ್ರಸನ್ನಗೌಡ. ಬಸವರಾಜ್, ನಿಂಗಪ್ಪಾಜಿ, ರವಿಕುಮಾರ್, ಚಂದ್ರಶೇಖರ್, ಬೊಮ್ಮೇಗೌಡ ಮತ್ತಿತರರು ಭಾಗವಹಿಸಿದ್ದರು.




