Tuesday, November 24, 2026

ಪ್ರಾಯೋಗಿಕ ಆವೃತ್ತಿ

ರೈತಸಂಘಗಳ ಏಕೀಕರಣ ಒಕ್ಕೂಟದಿಂದ ಪಾದಯಾತ್ರೆ : ಮಂಜೇಗೌಡ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಚ್ಚೆ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಒಕ್ಕೂಟದ ವತಿಯಿಂದ ಮಾ.6ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮಂಜೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ನೀತಿ ಅನುಸರಿಸುವ ಸರ್ಕಾರಗಳಿಂದ ರೈತನ ಸಾಲದ ಹೊರೆ ಹೆಚ್ಚಾಗಿ, ದುಡಿಯುವ ವರ್ಗದ ಆರ್ಥಿಕ ಶಕ್ತಿ ಬಲವರ್ಧನೆಗೆ ಯಾವುದೇ ಭರವಸೆ ಇಲ್ಲವಾಗಿದೆ ಎಂದರು.

ಕೃಷಿ ಚಟುವಟಿಗೆ ಬಳಸುವ ಅಗತ್ಯ ವಸ್ತುಗಳು, ಉಪಕರಣಗಳ ಬೆಲೆ ಹೆಚ್ಚಾಗಿದ್ದು, ಅವುಗಳ ಮೇಲೆ ಜಿಎಸ್‌ಟಿ ಹೊರೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯದಿರುವುದು ಮತ್ತಿತರ ಕಾರಣಗಳಿಂದಾಗಿ ಕೃಷಿ ಉದ್ದೇಶಿದ ಜಮೀನು ಶೇ.58ರಷ್ಟು ಕ್ಷೀಣಿಸಿದೆ. ರೈತರ ಮಕ್ಕಳು ಬದುಕು ಕಟ್ಟಿಕೊಳ್ಳಲಾಗದೆ ವೈವಾಹಿಕ ಜೀವನದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಅಳಲು ಹೇಳಿಕೊಂಡರು.

ಕೃಷಿ ಅವನತಿಯತ್ತ ಸಾಗುತ್ತಿರುವ ಹಿನ್ನಲೆ ಹೋರಾಟದ ಅನಿವಾರ್ಯತೆ ಹೆಚ್ಚಿದ್ದು, ರಾಜ್ಯ ಸರ್ಕಾರ ಹಾಲಿ ಬಜೆಟ್‌ನಲ್ಲಿ ಕೃಷಿ ಬಜೆಟ್ ಮಂಡನೆ ಮಾಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ , ಸರಳ ರೂಪದಲ್ಲಿ ಸಾಲ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಅಕ್ರಮ- ಸಕ್ರಮ ಅರ್ಜಿ ಸಲ್ಲಿಸಲು ಅವಕಾಶ, ವಿದ್ಯುತ್ ಸಂಪರ್ಕ, ಹಾಳಿನ ದರ, ಪ್ರೋತ್ಸಾಹ ಧನ ಹೆಚ್ಚಳ, ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಾಧ್ಯಮ ಕಾರ್ಯದರ್ಶಿ ಪ್ರಕಾಶ್, ಜವರೇಗೌಡ, ಸುರೇಶ್, ಚಂದ್ರಶೇಖರ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ