Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಟಿ.ಮಲ್ಲಿಗೆರೆ ಗ್ರಾಮದಲ್ಲಿ ಸವರ್ಣಿಯರ ಗುಂಪು ಪರಿಶಿಷ್ಠ ಜಾತಿ(ಮಾದಿಗ ಜನಾಂಗ)ಯ ಜಯದೇವ ಎಂಬುವನು  ಸೇರಿದಂತೆ 7 ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೂಡಲೇ ಕಿಡಿಗೇಡಿಗಳ ಬಂಧಿಸುವಂತೆ ಆಗ್ರಹಿಸಿ ದಲಿತರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ದಸಂಸ ಸಂಚಾಲಕ ನಂಜುಂಡ ಮೌರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ದಲಿತರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಂಡ್ಯ ತಾಲ್ಲೂಕು ಶಿವಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿ.ಮಲ್ಲಿಗೆರೆ ಗ್ರಾಮದಲ್ಲಿ ವಾಸವಾಗಿರುವ ಪ.ಜಾತಿಗೆ ಸೇರಿದ ಮಾದಿಗ ಸಮುದಾಯದ 5 ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ ಜ.8ರಂದು ರಾತ್ರಿ ಸುಮಾರು 10ರಿಂದ 11 ಗಂಟೆ ಸಮಯದಲ್ಲಿ ಸವರ್ಣೀಯರು ವಿನಾ ಕಾರಣ ಜಗಳ ತೆಗೆದು, ಜಾತಿ ನಿಂದನೆ ಮಾಡಿ ಅವ್ಯಾಚ ಪದಗಳಿಂದ ನಿಂದಿಸಿರುವುದಲ್ಲದೇ, ದಲಿತ ಯುವಕ ಸೇರಿದಂತೆ 7 ಜನ ದಲಿತರ ಮೇಲೆ ಸುಮಾರು 30 ಸವರ್ಣೀಯರು ಗುಂಪು ಕಟ್ಟಿಕೊಂಡು ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೆಟ್ರೋಲ್- ಸೀಮೆಎಣ್ಣೆ ತಂದು ಮನೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ಧಾರೆಂದು ಪ್ರತಿಭಟನಾಕಾರರು ದೂರಿದರು.

ಘಟನೆಯಲ್ಲಿ ಹಲ್ಲೆಗೊಳಗಾದವರು ಮಂಡ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕೀತ್ಸೆ ಪಡೆಯುತ್ತಿರುತ್ತಾರೆ. ಆದರೆ ಘಟನೆ ನಡೆದು 3 ದಿನಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ಅವರ ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡುತಿದ್ದಾರೆ. ಇದರಿಂದ 5 ದಲಿತ ಕುಟುಂಬಗಳಿಗೆ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.

ಕೂಡಲೇ ಪೊಲೀಸರು ಸಂಬಂಧಪಟ್ಟ ಕಿಡಿಗೇಡಿಗಳನ್ನು ಬಂಧನ ಮಾಡಿ,  ನೊಂದ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಟಿ.ಮಲ್ಲಿಗೆರೆ ಗ್ರಾಮದ ದಲಿತರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ