ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಮನುಷ್ಯ ವಿರೋಧಿ ಮನುಸ್ಮೃತಿಯನ್ನು ಸುಟ್ಟು, ಅಮಿತ್ ಶಾ ಹೇಳಿಕೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
‘ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಆಯೋಜಿಸಿದ್ದ “ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶ”ದಲ್ಲಿ ಮನುಸ್ಮೃತಿಯ ಜೀವ ವಿರೋಧಿ ಶ್ಲೋಕಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಗೃಹ ಸಚಿವ ಅಮಿತ್ ಶಾ ಹೇಳಿರುವ ‘ಈ ದೇಶದ ಜನರಿಗೆ ಅಂಬೇಡ್ಕರ್ ಒಂದು ಫ್ಯಾಷನ್ ಆಗಿದೆ, ಇದರ ಬದಲಿಗೆ ದೇವರ ಹೆಸರು ಹೇಳಿದ್ದರೆ ಸ್ವರ್ಗಕ್ಕೆ ಹೋಗುತ್ತಿದ್ದರು’ ಎಂಬ ಬೇಜವಾಬ್ದಾರಿ ಹೇಳಿಕೆಯ ವಿರುದ್ಧ ಪ್ರತಿಭಟನಕಾರರು ಕಿಡಿಕಾರಿದರು.
ಬಹಿರಂಗ ಸಭೆಯಲ್ಲಿ ಬಾರುಕೋಲು ಪತ್ರಿಕೆ ಸಂಪಾದಕ ಹಾಗೂ ವಕೀಲ ಬಿ.ಆರ್.ರಂಗಸ್ವಾಮಿ ಮಾತನಾಡಿ, ‘ಮನುಸ್ಮೃತಿ’ ಅಂದರೆ ದಲಿತ, ಹಿಂದುಳಿದ, ಮಹಿಳೆ ಹಾಗೂ ಮಕ್ಕಳ ವಿರೋಧಿಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಅದು ಸಮಸ್ತ ಮಾನವ ಜನಾಂಗದ ಶತ್ರುವಾಗಿದೆ ಎಂದು ವಿವರಿಸಿದರು.

ಹಕ್ಕೊತ್ತಾಯಗಳು
ಅಂಬೇಡ್ಕರ್ ಅಂದರೆ ಕೇವಲ ಹೆಸರಲ್ಲ, ಈ ದೇಶದ ಶೋಷಿತ ಸಮುದಾಯಗಳ ಶಕ್ತಿ. ಅಂಬೇಡ್ಕರ್ ಅವರಿಂದ ಈ ದೇಶದ ಬಹುಸಂಖ್ಯಾತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ತಮ್ಮ ಘನತೆ ಮತ್ತು ಸ್ವಾಭಿಮಾನದ ಬದಕನ್ನು ಪಡೆದುಕೊಂಡಿರುತ್ತಾರೆ. ಈ ಕಾರಣದಿಂದ ತಮ್ಮ ಪ್ರತಿ ಉಸಿರಿನಲ್ಲೂ ಅಂಬೇಡ್ಕರ್ರವರ ಹೆಸರನ್ನು ಸ್ಮರಿಸುತ್ತಾರೆ. ಆದರೆ, ಮನುವಾದಿಗಳು ದೇವರು, ಧರ್ಮ, ಸ್ವರ್ಗ, ನರಕ… ಎಂದು ನಮ್ಮನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಮನುಸ್ಮೃತಿಯನ್ನು ಜಾರಿಗೆ ತರುವ ಹುನ್ನಾರವನ್ನು ನಡೆಸುತ್ತಿರುತ್ತಾರೆ. ಇದರ ಭಾಗವಾಗಿಯೇ ಅಮಿತ್ ಷಾ, ಅಂಬೇಡ್ಕರ್ರವರನ್ನು ಅವಮಾನಿಸಿರುತ್ತಾರೆ. ಅಸಮಾನತೆಯನ್ನು ಭೋದಿಸುವ ಮನವಾದಿಗಳ ಮನುಸ್ಮೃತಿ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟಿಸುತ್ತಿದ್ದೇವೆ.
ಈ ಪ್ರತಿಭಟನೆ ಮೂಲಕ ಭಾರತದ ದುಡಿಯುವ ವರ್ಗ ಮತ್ತು ತಳಸಮುದಾಯಗಳು ಅಂಬೇಡ್ಕರ್ಗೆ ಆಗುವ ಅಪಮಾನ ಮತ್ತು ಅಗೌರವಗಳನ್ನು ಎಂದಿಗೂ ಸಹಿಸುವುದಿಲ್ಲ ಮತ್ತು ಅಹಿಂದ ಜನ ಸಮುದಾಯವು ಆರ್.ಎಸ್.ಎಸ್. ಸೇರಿದಂತೆ ಸಂಘ ಪರಿವಾರದ ಯಾವುದೇ ಜನ ವಿರೋಧಿ ನೀತಿಯನ್ನು ಸಹಿಸುವುದಿಲ್ಲವೆಂದು ಎಚ್ಚರಿಸುತ್ತದೆ.
ಅಂಬೇಡ್ಕರ್ರವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಅಂಬೇಡ್ಕರ್ ಪತ್ರಿಮೆ ಮುಂದೆ ಮಂಡಿಯೂರಿ ಕುಳಿತು ಬೇಷರತ್ತಾಗಿ ಕ್ಷೇಮೆ ಕೇಳಬೇಕು.
ಕೇಂದ್ರ ಸಚಿವ ಸಂಪುಟದಿಂದ ಅಮಿತ್ ಶಾ ವಜಾಮಾಡಬೇಕೆಂದು “ಪ್ರಗತಿಪರ ಸಂಘಟನೆಗಳ ಒಕ್ಕೂಟ” ಬೆಳ್ಳೂರು ಆಗ್ರಹಿಸುತ್ತದೆ.
ಗೌತಮ ಬುದ್ಧನ ಜೀವಸ್ಮೃತಿ ಇಡೀ ದೇಶದಲ್ಲಿ ವಿಸ್ತರಿಸಿದ್ದ ಆ ಕಾಲದಲ್ಲಿ ಅದರ ವಿರುದ್ಧವಾದ ಮನುಸ್ಮೃತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಇದರ ಪರಿಣಾಮವಾಗಿ ವಿದ್ಯೆ ಕಲಿತರೆ ಅವರ ಕಿವಿಗೆ ಕಾದ ಸೀಸವನ್ನು ಸುರಿಯಲಾಗುತ್ತಿತ್ತು, ವಿದ್ಯೆಯನ್ನು ಉಚ್ಚರಿಸಿದರೆ ಅವರ ನಾಲಿಗೆಯನ್ನು ಸೀಳಲಾಗುತ್ತಿತ್ತು, ವಿದ್ಯೆಯನ್ನು ತನ್ನ ದೇಹದಲ್ಲಿ ಅರಗಿಸಿಕೊಂಡಿದ್ದಾನೆ ಎಂದಾದರೆ ಅವನ ದೇಹವನ್ನೇ ಉದ್ದುದ್ದ ಸೀಳಿಹಾಕುವ ಕ್ರೂರ ಕೆಲಸಕ್ಕೆ ಮನುಸ್ಮೃತಿ ಕುಮ್ಮಕ್ಕು ನೀಡುತ್ತದೆ. ಮಹಿಳೆಯರನ್ನು ಅತ್ಯಂತ ಹೀನ ಸ್ಥಿತಿಗೆ ತಳ್ಳಿದ್ದೇ ಈ ಮನುಸ್ಮೃತಿ, ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಅಂದರೆ ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ನೀಚ ಶಾಸನವು ಮನುಸ್ಮೃತಿಯದ್ದಾಗಿದೆ. ಹೆಣ್ಣು ಮಕ್ಕಳು ವಿದ್ಯೆ ಕಲಿಯುವಂತಿಲ್ಲ, ನಾಲ್ಕು ಗೋಡೆಯ ಬದುಕಿಗೆ ಸೀಮಿತವಾಗಬೇಕೆಂಬ ದುಸ್ಥಿತಿಗೆ ತಳ್ಳಿದ್ದೇ ಮನುಸ್ಮೃತಿಯಾಗಿದೆ ಎಂದು ತಿಳಿಸಿದರು.
ಜೀವ ವಿರೋಧಿಯಾದ ಈ ಮನುಸ್ಮೃತಿಯನ್ನು ಮೊಟ್ಟಮೊದಲನೆಯದಾಗಿ ಮಹಾತ್ಮ ಜ್ಯೋತಿ ಬಾ ಫುಲೆ ಸುಟ್ಟುಹಾಕಿದರು, ನಂತರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸುಟ್ಟುಹಾಕಿದರು. ಆ ನಂತರ ಪೆರಿಯಾರರೂ ಸುಟ್ಟುಹಾಕಿದರು. ಈ ದೇಶದ ಮಾನವತಾವಾದಿಗಳೆಲ್ಲರೂ ಈ ಜಗತ್ ಕುಪ್ರಸಿದ್ಧ ಕೃತಿಯನ್ನು ಸುಟ್ಟು ಬೂದಿ ಮಾಡಿದರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ನಿಕೇತ್ ರಾಜ್ ಮೌರ್ಯ ಪ್ರಧಾನ ಭಾಷಣ ಮಾಡಿದರು, ನ್ಯಾಯವಾದಿ ಜೀರಹಳ್ಳಿ ರಮೇಶ್ ಗೌಡ, ಶಿವಣ್ಣ, ವೆಂಕಟೇಶ್, ನಾಗರಾಜು, ರಘು, ಮಹೇಶ್, ಯಾಸಿನ್, ಶಿವಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




