Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜ.24ರಂದು ಫಲಪುಷ್ಪ- ಕೈಮಗ್ಗ ಉತ್ಪನ್ನಗಳ ಪ್ರದರ್ಶನ

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಅಂಗವಾಗಿ “ಫಲಪುಷ್ಪ ಪ್ರದರ್ಶನ 2025” ಹಾಗೂ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ “ಮಧುರ ವಸ್ತ್ರೋತ್ಸವ 2025″ರ ಉದ್ಘಾಟನಾ ಸಮಾರಂಭವನ್ನು ಜ.24ರಂದು ಬೆಳಿಗ್ಗೆ 10.00 ಗಂಟೆಗೆ ಮಂಡ್ಯ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಎಚ್.ಡಿ ಕುಮಾರಸ್ವಾಮಿ ಘನ ಉಪಸ್ಥಿತಿ ವಹಿಸಲಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರು ಎನ್.ಚೆಲುವರಾಯಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವಶಿವಾನಂದ ಎಸ್. ಪಾಟೀಲ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶಾಸಕರು ಎ.ಬಿ ರಮೇಶ ಬಂಡಿಸಿದ್ದೇಗೌಡ ಗೌರವ ಉಪಸ್ಥಿತಿ ವಹಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ವಿವೇಕಾನಂದ ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಹೆಚ್. ಟಿ ಮಂಜು, ಕೆ.ಎಂ ಉದಯ ಮತ್ತು ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷ ಸಿಡಿ ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಎಂ. ವಿ ಪ್ರಕಾಶ್ ( ನಾಗೇಶ್ )ರವರುಗಳು ಭಾಗವಹಿಸಲಿದ್ದಾರೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ರಂಗಸ್ವಾಮಿ ಭಾಗವಹಿಸುವರು ಎಂದರು.

ಜ. 24 ರಿಂದ 28 ರವರೆಗೆ ಫಲಪುಷ್ಪ ಪ್ರದರ್ಶನ
“ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ” ಶೀರ್ಷಿಕೆಯಡಿ ಜನವರಿ 24 ರಿಂದ 28 ರವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ-2025 ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಐದು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲೆಯ ರೈತರು, ಸಾರ್ವಜನಿಕರು, ನಾಗರೀಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ಉದ್ಯಾನವನದಲ್ಲಿ ಮನಸೂರೆಗೊಳ್ಳುವ ವಿವಿಧ ಹೂ ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು ಹಾಗೂ ಪೌಷ್ಠಿಕ ಕೈತೋಟ ಮಾದರಿ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ ಮತ್ತು ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿದ್ಯತೆಯ ಮಾದರಿಗಳ ಪ್ರದರ್ಶನ ಹಾಗೂ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಫಲಪುಷ್ಪ ಪ್ರದರ್ಶನದಲ್ಲಿ ನೀಡಲಾಗುವುದು ಎಂದರು.

ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6 ಗಂಟೆಯಿAದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಯಸ್ಕರಿಗೆ ಟಿಕೆಟ್ ದರ 30, 6-12 ವರ್ಷದ ಮಕ್ಕಳಿಗೆ 20 ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳ ಗುಂಪುಗಳಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ ಎಂದರು.

ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು
ಪ್ರಸ್ತುತ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ 9ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ವಿವಿಧ ಬಣ್ಣದ ಗುಲಾಬಿ ಹೂವುಗಳನ್ನು ಬಳಸಿ ಪ್ರಸಿದ್ದ ದೇವಾಲಯ ಹಾಗೂ ಪ್ರಸಿದ್ದ ಪ್ರವಾಸಿ ತಾಣಗಳನ್ನು ನಿರ್ಮಿಸಿ ಆಕರ್ಷಿಸಲಾಗುವುದು.
ಜಿಲ್ಲೆಯ ಪ್ರಸಿದ್ದ ದೇವಾಲಯವಾದ ಮೇಲುಕೋಟೆಯ ಯೋಗನರಸಿಂಹ ಸ್ವಾಮಿ ದೇವಾಲಯ. ಕರ್ನಾಟಕ ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟು. ಹಳ್ಳಿ ಸೊಗಡಿನ ರೈತನ ಮನೆ, ಏಳು ಬೆಟ್ಟದ ಒಡೆಯ ಮಲೆ ಮಹದೇಶ್ವರ ದೇವಾಲಯಗಳು ಫಲಪುಷ್ಪ ಪ್ರದರ್ಶನದ ಆಕರ್ಷಣೆಗಳಾಗಲಿವೆ ಎಂದರು.
ಯುವ ಜನತೆಯನ್ನು ಸೆಳೆಯಲು ಹತ್ತು ವಿವಿಧ ಕಡೆಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯೊನ್ನೊಳಗೊಂಡ ಸ್ಥಬ್ಥ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ, ಬೋನ್ಸಾಯ್ ಗಿಡಗಳ ಪ್ರದರ್ಶಿಕೆ, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಹಾಗೂ ಇಕೆಬನಾ ಜೋಡಣೆ ಆಕರ್ಷಿಸಲಿವೆ ಎಂದರು.

ವಿಶೇಷ ಆಕರ್ಷಣೆಗಳಿವು
35 ಸಾವಿರಕ್ಕೂ ಹೆಚ್ಚು 40 ಬಗೆಯ ವಿವಿಧ ಜಾತಿಯ ಹೂವುಗಳ ಅಲಂಕಾರಿಕ ಕುಂಡಗಳ ಜೋಡಣೆ, 1.50 ಲಕ್ಷ ವಿವಿಧ ಜಾತಿಯ ಅಲಂಕಾರಿಕ ಗಿಡಗಳಾದ ಪೆಟೊನಿಯಾ, ಸಾಲ್ವಿಯಾ, ಅಂಟಿರೈನಂ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಪಾಯ್ನಿಸೆಟಿಯಾಗಳನ್ನು ಜೋಡಿಸಲಾಗುವುದು ಎಂದು ತಿಳಿಸಿದರು.

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಜಿಲ್ಲೆಗಳ ಕೈಮಗ್ಗ, ನೇಕಾರರ ಸಹಕಾರ ಸಂಘಗಳು ಭಾಗವಹಿಸಿ, ಕೈ ಮಗ್ಗ ನೇಕಾರರಿಂದ ತಯಾರಿಸಿರುವ ಹತ್ತಿ, ರೇಷ್ಮೆ, ಮೊಳಕಾಲ್ಮೂರು ರೇಷ್ಮೆ ಸೀರೆ, ಚಿಂತಾಮಣಿ ರೇಷ್ಮೆ ಸೀರೆ, ಕಾಟನ್ ಸೀರೆ, ಪಂಚೆ, ಬೆಡ್‌ಶೀಟ್, ಟವಲ್, ಲುಂಗಿ ಹಾಗೂ ಇತರೆ ಕೈ ಮಗ್ಗ ಉತ್ಪನ್ನಗಳನ್ನು ಶೇ.20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದ್ದಾರೆ ಎಂದರು.

ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳನ್ನು ಹಾಗೂ ಪ್ರಾತ್ಯೇಕ್ಷತೆಯನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ರೈತರು ಬೆಳೆದಿರುವ ವಿವಿಧ ಹಣ್ಣು, ತರಕಾರಿ ಮತ್ತು ಪ್ಲಾಂಟೇಷನ್ ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಮಾದರಿಗಳ ಪ್ರದರ್ಶನವಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರಿ ಕೆ.ಎನ್. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಬಿ.ಎನ್.ಸುವೇದ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಎಸ್.ಪಿ.ಶ್ರೀಧರ್ ಹಾಗೂ ನಿರ್ದೇಶಕರಾದ ಎಂ.ಆರ್.ಅರವಿಂದ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ