ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಪಕ್ಷ ನಿರ್ಧರಿಸಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದೆ.
ಮಂಡ್ಯ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಕೇಂದ್ರ ಇಂಧನ ಮತ್ತು ಕೈಗಾರಿಕಾ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಜಿಲ್ಲಾ ಭೇಟಿಯನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಜುಲೈ 5 ರಿಂದ 7ರವರೆಗೆ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ ಬೂತ್ ಕೇಂದ್ರಗಳಿಗೆ ಭೇಟಿ ನೀಡಲಿರುವ ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕಾ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಖುದ್ದು ಭೇಟಿ ಮಾಡಿ ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಕೇಂದ್ರ ಸಚಿವರ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಂದು ನಡೆದ ಸಭೆಯಲ್ಲಿ ಮುಖಂಡರು ನಿರ್ಧರಿಸಿದರು.
ಕೇಂದ್ರ ಸಚಿವರ ಕಾರ್ಯಕ್ರಮವನ್ನು ಮಂದಿಟ್ಟುಕೊಂಡು ಈ ಭಾಗದಲ್ಲಿ ಪಕ್ಷದ ಸಂಘಟನೆ ಬಲಗೊಳ್ಳಲು ಶ್ರಮಿಸಬೇಕೆಂದು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಲಕ್ಷ್ಮಿ ಅಶ್ವಿನ್ ಗೌಡ, ಅಶೋಕ್ ಜಯರಾಂ, ಕಾಡೇನಹಳ್ಳಿ ನಾಗಣ್ಣಗೌಡ, ನಗರ ಘಟಕದ ಅಧ್ಯಕ್ಷ ವಿವೇಕ್, ಉಪಾಧ್ಯಕ್ಷ ಶ್ರೀಧರ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಕ್ಷದ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರು ಭಾಗವಹಿಸಿದ್ದರು.