Friday, March 1, 2024

ಪ್ರಾಯೋಗಿಕ ಆವೃತ್ತಿ

ನಾಡಿನ ಸಾಮರಸ್ಯ ಉಳಿವಿಗಾಗಿ ಬಹು ಸಂಸ್ಕೃತಿ ಸಾಮರಸ್ಯ ಮೇಳ

ಇಂದು ದೇಶದಲ್ಲಿ ಸಾಮರಸ್ಯ ಕದಡುವ ಹಲವು ಘಟನೆಗಳು ದಿನನಿತ್ಯ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ದೇಶದ ಸಾಮರಸ್ಯ ಉಳಿವಿಗಾಗಿ ಪ್ರಜಾತಂತ್ರವಾದಿಗಳೆಲ್ಲ ಒಗ್ಗೂಡ ಬೇಕಿದೆ ಎಂದು ಸಮಾನ ಮನಸ್ಕರ ವೇದಿಕೆಯ ಪ್ರೊ.ಹುಲ್ಕೆರೆ ಮಹದೇವು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇಂದು ಧರ್ಮಗಳ ನಡುವೆ ಶಾಂತಿ ಕದಡುವ ಘಟನೆಗಳು ದೇಶಾದ್ಯಂತ ನಡೆಯುತ್ತಿವೆ. ಶಾಂತಿ, ಸೌಹಾರ್ದತೆಯಿಂದ ಇರಬೇಕಾದ ನಾಡಿನಲ್ಲಿ ಬೆಂಕಿ ಹಚ್ಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ.ಇದನ್ನು ತಪ್ಪಿಸಿ ಪ್ರಜಾತಂತ್ರ, ಸಂವಿಧಾನ,ಸಾಮರಸ್ಯಕ್ಕಾಗಿ ಎಲ್ಲರೂ ಒಂದಾಗಬೇಕಿದೆ ಎಂದರು.

ದೇಶದ ಸಾಮರಸ್ಯ ಉಳಿವಿಗಾಗಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಟಿಪ್ಪು ಸುಲ್ತಾನ್ ಹುತಾತ್ಮನಾದ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ `ಬಹುಸಂಸ್ಕೃತಿ ಸಾಮರಸ್ಯ ಮೇಳ-2022’ನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೇಳದ ಅಂಗವಾಗಿ ಟಿಪ್ಪು ಹೆಸರನ್ನು ಶತ ಶತಮಾನಕ್ಕೂ ಚಿರಸ್ಥಾಯಿಯಾಗಿಸುವ ಭಾಗವಾಗಿ ಬೃಹತ್ ರಕ್ತದಾನ ಶಿಬಿರ ಸೇರಿದಂತೆ ಸಾಮರಸ್ಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಚಿತ್ರನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಉದ್ಘಾಟಿಸಲಿದ್ದು, ವೈದ್ಯ ಗಾಂಧಿವಾದಿ ಡಾ. ಸುಜಯ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಕೃತಿ ಚಿಂತಕ ಜನಾರ್ಧನ್ (ಜನ್ನಿ) ಪುಸ್ತಕ ಬಿಡುಗಡೆ ಮಾಡಲಿದ್ದು, ಇತಿಹಾಸ ತಜ್ಞ ನಂಜರಾಜ ಅರಸ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ, ಶಾಸಕ ಕೆ. ಅನ್ನದಾನಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಪತ್ರಕರ್ತ ಮಂಜುನಾಥ್ ಅದ್ದೆ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಖ್ತಾರ್ ಅಹಮದ್, ಜಾ.ದಳ ಮುಖಂಡ ನಜ್ಮಾ ನಜೀರ್ ಚಿಕ್ಕನೇರಳೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀರಂಗಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ರಕ್ತದಾನ ಶಿಬಿರವನ್ನು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಉದ್ಘಾಟಿಸಲಿದ್ದು, ದಸಂಸ ಮುಖಂಡ ನಂಜುಂಡ ಮೌರ್ಯ, ಯುವ ಮುಖಂಡ ಲಂಕೇಶ್ ಮಂಗಲ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ 10 ಗಂಟೆಗೆ ಶ್ರೀರಂಗಪಟ್ಟಣದ ವಿಶ್ವಕವಿ ಕುವೆಂಪು ಪ್ರತಿಮೆ ಬಳಿಯಿಂದ `ಸಾಮರಸ್ಯ ನಡಿಗೆ’ ಏರ್ಪಡಿಸಿದ್ದು, ಸಾಮಾಜಿಕ ಕಾರ್ಯಕರ್ತ ಕೆ.ಎಲ್. ಅಶೋಕ್, ವಕೀಲ ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಟಿಪ್ಪು ಸಮಾಧಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಫಕ್ರೂಲ್ ಉಲೂಮ್ ಮುಖ್ಯಸ್ಥ ಮುಫ್ತಿ ರಿಜ್ವಾನ್ ಅಹಮದ್, ಮುಸ್ಲಿಂ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ತಾಹೇರ್ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪ್ರೊ. ಜಿ.ಟಿ.ವೀರಪ್ಪ, ಕರ್ನಾಟಕ ಜನಶಕ್ತಿಯ ಜ್ಯೋತಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ವಕೀಲ ನದೀಂ ಅಹಮದ್, ಲಕ್ಷ್ಮಣ್ ಚೀರನಹಳ್ಳಿ, ಟಿ.ಡಿ.ನಾಗರಾಜು, ಇದ್ದರು.

ಇದನ್ನು ಓದಿ: ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!