ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿಯ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಸರ್ಕಾರ ಆಹ್ವಾನಿಸದಿರುವುದು ಖಂಡನೀಯ ಎಂದು ಮಂಡ್ಯ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಕಿಡಿಕಾರಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ಈ ನಾಡು ಕಂಡ ಅಪ್ರತಿಮ ಜಾತ್ಯಾತೀತ ದೊರೆ ನಾಡಪ್ರಭು ಕೆಂಪೇಗೌಡರವರ ಪ್ರಗತಿಯ ಪ್ರತಿಮೆ ಅನಾವರಣಕ್ಕೆ ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಯದಿರುವುದು ರಾಜ್ಯ ಸರ್ಕಾರದ ಮೂರ್ಖತನದ ಪರಮಾವಧಿ. ಕೇವಲ ಓಟಿಗೋಸ್ಕರ ನಡೆಸುತ್ತಿರುವ ಒಂದು ಅರ್ಥಹೀನ, ಸೀಮಿತ ಕಾರ್ಯಕ್ರಮ ಎಂದಿದ್ದಾರೆ.
ನಾಡಪ್ರಭು ಕೆಂಪೇಗೌಡರವರು ಒಂದು ಜಾತಿ ಅಥವಾ ಒಂದು ಪಕ್ಷಕ್ಕೆ ಸೇರಿದವರಲ್ಲ. ಅವರು ನಾಡಿನ ಸರ್ವರನ್ನು ಸಮಾನತೆಯಿಂದ ನೋಡಿದ ಸರ್ವಜನಾಂಗದ ನಾಯಕ. ಅದರಂತೆ ಈ ದೇಶವನ್ನಾಳಿದ ಮಾಜಿ ಪ್ರಧಾನ ಮಂತ್ರಿ,ಕರ್ನಾಟಕದ ಅಗ್ರಗಣ್ಯ, ದೊಡ್ಡ ವ್ಯಕ್ತಿತ್ವದ ನಾಯಕರಾದ ಶ್ರೀ ಹೆಚ್.ಡಿ.ದೇವೇಗೌಡ ಅವರನ್ನು ಆಹ್ವಾನಿಸದೆ ಅಪಮಾನ ಮಾಡಿರುವುದು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದಂತೆ. ಇಂತಹ ಕ್ಷುಲ್ಲಕ ರಾಜಕೀಯ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಹಲವಾರು ಒಕ್ಕಲಿಗ ಜನಾಂಗದ ಪ್ರಭಾವಿ ಮಂತ್ರಿಗಳಿದ್ದರೂ ದೇವೇಗೌಡರನ್ನು ಆಹ್ವಾನಿಸದೆ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ. ನಿಮ್ಮ ನಡವಳಿಕೆ ಜನರಿಗೆ ಅರ್ಥವಾಗಿದ್ದು, ಮುಂದೆ ಕನ್ನಡ ನಾಡಿನ ಜನರು ನಿಮಗೆ ತಕ್ಕ ಶಾಸ್ತಿ ಮಾಡುವ ದಿನಗಳು ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




