Friday, November 20, 2026

ಪ್ರಾಯೋಗಿಕ ಆವೃತ್ತಿ

ನೂತನ ಶಿಕ್ಷಣ ನೀತಿಯಿಂದ ಕೋಮುವಾದದ ವಿಷಬೀಜ ಭಿತ್ತನೆ : ರಾಹುಲ್ ಗಾಂಧಿ

ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯು  ಕೋಮುವಾದಿಕರಣ, ವಾಣಿಜ್ಯಕರಣ ಹಾಗೂ ಕೇಂದ್ರಿಕರಣದಿಂದ ಕೂಡಿದ್ದು, ನಮ್ಮ ದೇಶದ ಶಿಕ್ಷಣ ಕ್ಷೇತ್ರದ ಅಡಿಪಾಯ ನಾಶ ಮಾಡಿ, ಕೋಮುವಾದದ ವಿಷಬೀಜವನ್ನು ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಬಿತ್ತುತ್ತಿದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.

ಭಾರತ ಜೋಡೋ ಯಾತ್ರೆಯ ವಿರಾಮದ ಸಮಯದಲ್ಲಿ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಗ್ರಾಮದ ಬಳಿ ಶಿಕ್ಷಣ ಕ್ಷೇತ್ರ ತಜ್ಞರು, ಹಲವು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು, ಶಿಕ್ಷಕಿಯರ ಜತೆ ಸಂವಾದ ನಡೆಸಿದ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಣ ಕ್ಷೇತ್ರದ ಪ್ರಮುಖರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎನ್ ಇಪಿ ಜಾರಿ ನಂತರ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ತೊಂದರೆಗಳ ವಿಚಾರವನ್ನು ರಾಹುಲ್ ಗಾಂಧಿ ಅವರ ಮುಂದೆ ಪ್ರಸ್ತಾಪಿಸಿದರು.

ರಾಜ್ಯದ ಪಠ್ಯಪುಸ್ತಕದಲ್ಲಿ ಸಾರ್ವಕರ್ ವಿಚಾರವಾಗಿ ಇರುವ ಪಾಠದಲ್ಲಿ ಬುಲ್ ಬುಲ್ ಹಕ್ಕಿ, ಮೇಲೆ ಕೂತು ತಾಯ್ನಾಡನ್ನು ಸಂದರ್ಶಿಸುತ್ತಿದ್ದರು ಎಂಬಂತಹ ಕಟ್ಟು ಕಥೆಗಳು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ವಿಚಾರವೂ ಚರ್ಚೆ ಆಯಿತು. ಈ ರೀತಿ ಮಾಡುತ್ತಿರುವುದೇಕೆ ಎಂದು ಕೇಳಿದಾಗ, ಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಹೊಸ ಹೊಸ ಪುರಾಣಗಳನ್ನು ಸೃಷ್ಟಿಸಿ ಅವರು ನಂಬುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರಿಗೆ ಪ್ರಾಮುಖ್ಯತೆ ನೀಡಲು ಇಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಆರ್ ಎಸ್ಎಸ್ ಗೆ ಆರ್ಥಿಕ ನೆರವು ಹೇಗೆ ಬರುತ್ತಿದೆ ಎಂದು ಕೇಳಿದಾಗ ಅದಕ್ಕೆ ಸರಿಯಾದ ದಾಖಲೆಗಳು ಇಲ್ಲವಾಗಿದೆ. ಆದರೆ ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಸಾರ್ವಜನಿಕ ಶಾಲೆಗಳಿಗೆ ಹೋಗಬೇಕಾದ ಅನುದಾನಗಳು ಆರ್ ಎಸ್ಎಸ್  ಶಾಲೆಗಳಿಗೆ ನೀಡಲಾಗುತ್ತಿದೆ ಎಂಬ ವಿಚಾರ ಚರ್ಚೆ ಆಯಿತು.

ಕೋವಿಡ್ ಸಮಯದಲ್ಲಿ ಶಾಲೆ ಮುಚ್ಚಿದ ಪ್ರಮಾಣದಲ್ಲಿ ದೇಶವೇ ಮೊದಲಾಗಿದೆ. ಈ ಸಂದರ್ಭದಲ್ಲಿ ಶ್ರೀಮಂತರ ಮಕ್ಕಳು ಶಿಕ್ಷಣ ಪಡೆದರು, ಬಡವರು 2 ವರ್ಷ ಶಿಕ್ಷಣದಿಂದ ದೂರವಾಗಿದ್ದರು. ಈ ಮಕ್ಕಳು ಹೇಗೆ ತಮ್ಮ ಶಿಕ್ಷಣದ ಕೊರತೆ ನೀಗಿಸುತ್ತಾರೆ, ಇದಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿಚಾರಗಳು ಚರ್ಚೆ ಆದವು.

ಮಂಡ್ಯ ಮೂಲದ ಶಿಕ್ಷಕಿ ಮಾತನಾಡಿ, ಪೋಷಕರು ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಗಳತ್ತ ಹೆಚ್ಚಿನ ಒಲವು ತೋರಿದ್ದು, ಅವರ ಪ್ರಕಾರ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಅನುದಾನ, ಶಿಕ್ಷಕರಿಗೆ ಅನುದಾನ ನೀಡುತ್ತಿಲ್ಲ. ಹೀಗಾಗಿ ಬಡವರು ಕೂಡ ಖಾಸಗಿ ಶಾಲೆಗಳತ್ತ ಮುಖಮಾಡಿದ್ದಾರೆ ಎಂದರು. ಇದಕ್ಕೆ ಪರಿಹಾರ ಏನು ಎಂದು ಕೇಳಿದಾಗ ಉತ್ತರಿಸಿದ ರಾಹುಲ್ ಗಾಂಧಿ ಅವರು, ಸರ್ಕಾರಗಳು ಅನುದಾನಗಳನ್ನು ಹೆಚ್ಚಿಸಬೇಕು. ಈ ಬಗ್ಗೆ ಪ್ರಣಾಳಿಕೆಯಲ್ಲಿ ವಿಚಾರ ಸೇರಿಸುತ್ತೇವೆ. ಸರ್ಕಾರದಿಂದ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಐಐಟಿಗಳೆಲ್ಲವೂ ಸರ್ಕಾರದ ಕಾಲೇಜುಗಳಾಗಿವೆ. ಸರ್ಕಾರ ಮನಸ್ಸು ಮಾಡಿದರೆ ಉತ್ತಮ ಶಿಕ್ಷಣ ನೀಡಬಹುದು ಎಂದರು.

ಇನ್ನು ಮಹಿಳೆಯರ ವಿಚಾರ, ಹಿಜಾಬ್ ವಿವಾದದಿಂದ ಹೆಣ್ಣು ಮಕ್ಕಳ ಶಿಕ್ಷಣ ಕಸಿಯುವ ಪ್ರಯತ್ನ, ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಪಠ್ಯ ಕೋಮುವಾದದಿಂದ ತುಂಬಿರುವುದರ ಬಗ್ಗೆ ಚರ್ಚೆ ಮಾಡಿದರು. ಕಡೆಯದಾಗಿ ರಾಹುಲ್ ಗಾಂಧಿ ಅವರು ಮಾತನಾಡಿ, ಇದು ಚಿಕ್ಕ ಚರ್ಚೆ ಮಾಡಿದ್ದೇವೆ ಅಷ್ಟೇ. ಇನ್ನುಮುಂದೆ, ನಮ್ಮ ರಾಜ್ಯದ ಪ್ರಣಾಳಿಕೆ, ಹಾಗೂ ರಾಷ್ಟ್ರ ಪ್ರಣಾಳಿಕೆಗಳಲ್ಲಿ ನಿಮ್ಮ ಅಭಿಪ್ರಾಯ ಸಂಗ್ರಹಿಸಿ ಜನರ ಪ್ರಣಾಳಿಕೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಇಂದು ಸಂವಾದಕ್ಕೆ ಆಗಮಿಸಿದ್ದ ಶಿಕ್ಷಣ ತಜ್ಞರು ಶಿಕ್ಷಣ ಕ್ಷೇತ್ರದ ತುರ್ತುಪರಿಸ್ಥಿತಿಯಲ್ಲಿ ಆಗುತ್ತಿರುವ ಮೂರು ವಿಚಾರಗಳನ್ನು ಪ್ರಸ್ತಾಪಿಸಿದರು. ಅವುಗಳೆಂದರೆ ಕಮ್ಯುನಲೈಸೇಷನ್, ಸೆಂಟ್ರಲೈಸೇಷನ್, ಕಮರ್ಷಿಯಲೈಸೇಷನ್ ವಿಚಾರ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಮಾಡಿರುವ ಅವಾಂತರ ಹೇಗಿದೆ ಎಂದು ನಿಮಗೆ ಗೊತ್ತಿದೆ. ಇತಿಹಾಸ ತಿರುಚುವುದು, ತತ್ವಜ್ಞಾನಿಗಳಿಗೆ ಅಪಮಾನ, ವೈಜ್ಞಾನಿಕತೆ ಬಿಟ್ಟು ಪಠ್ಯಗಳ ಸೇರ್ಪಡೆ ವಿರುದ್ಧ ಧ್ವನಿ ಎತ್ತಿದರು. ಈ ಸಂವಾದದಲ್ಲಿ ಭಾಗಿಯಾಗಿದ್ದವರು ನಮಗೆ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವಿಲ್ಲ. ಆದರೂ ಈ ಯಾತ್ರೆಯಲ್ಲಿ ಭಾಗವಹಿಸಿದ್ದು, ಸಂವಿಧಾನ ಉಳಿವಿಗಾಗಿ ಎಂದು ಹೇಳಿದರು.

ಎನ್ ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ

ಎನ್ ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ. ಅಲ್ಲಿ ಇತಿಹಾಸ ಹಾಗೂ ಪುರಾಣಕ್ಕೆ ಗೊಂದಲವಿದೆ. ನಾವು ಪುರಾಣ, ಮಹಾಭಾರತ, ರಾಮಾಯಣದ ವಿರುದ್ಧ ಇಲ್ಲ. ಅದನ್ನು ಕಲಿತು ಅದರ ಜತೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಪಾಠಗಳನ್ನು ಕಲಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದರೆ ಎನ್ ಇಪಿ ರದ್ದು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಗೌಡ, ಶಿಕ್ಷಣವು ಕೇಂದ್ರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ರಾಜ್ಯದ ವಿಚಾರ. ಹೀಗಾಗಿ ನಮ್ಮ ಸರ್ಕಾರ ಬಂದರೆ ವೈಜ್ಞಾನಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು. ನಂತರ ಮಾತನಾಡಿದ ಕಾಂಗ್ರೆಸ್ ಸಂಹವನ ವಿಭಾಗ ಮುಖ್ಯಸ್ಥ  ಜೈರಾಮ್ ರಮೇಶ್ ಅವರು ‘ನಮ್ಮ ಸರ್ಕಾರ ಬಂದರೆ ಈ ಎನ್ಇಪಿಯ ಪ್ರತಿ ಪದವನ್ನು ರದ್ದು ಮಾಡಲಾಗುವುದು’ ಎಂದರು.

ನಂತರ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ರಾಜ್ಯ ಸರ್ಕಾರ ಎನ್ ಇಪಿ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ವತಃ ಸರ್ಕಾರವೇ ಈ ಎನ್ಇಪಿಗೆ ರಾಜ್ಯ ಸಿದ್ಧವಾಗಿಲ್ಲ. ಹೀಗಾಗಿ ಇದನ್ನು ಜಾರಿಗೆ ತರಲು ಹಲವು ವರ್ಷಗಳು ಬೇಕಿದೆ ಎಂದು ಹೇಳಿದೆ. ಕೆಲವು ಮಂತ್ರಿಗಳು ಈ ಎನ್ಇಪಿ ಜಾರಿ ಮಾಡಿದರೆ ನಾಗ್ಪುರದವರನ್ನು ಮೆಚ್ಚಿಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದು ಮಂತ್ರಿಗಳ ಅನುಕೂಲಕ್ಕೆ ಹೊರತು, ವಿದ್ಯಾರ್ಥಿಗಳಿಗೆ ಅಲ್ಲ’ ಎಂದರು.

ಆರ್ ಎಸ್ಎಸ್ ನವರು 5 ವಿವಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ರಾಜ್ಯದಲ್ಲಿ ಚಾಣಕ್ಯ ವಿವಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿವಿಗೆ ಕಡಿಮೆ ಬೆಲೆಗೆ ಸರ್ಕಾರ ಜಾಗವನ್ನು ಮಂಜೂರು ಮಾಡಿದೆ. ಸದನದಲ್ಲಿ ನಮಗೆ ಸಂಖ್ಯಾಬಲದ ಕೊರತೆಯಿಂದ ಇದನ್ನು ತಡೆಯಲು ಆಗಲಿಲ್ಲ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಬೇಕಾದರೆ ಕಾಂಗ್ರೆಸ್ ಪಕ್ಷವೇ ಉತ್ತಮ ಆಯ್ಕೆ’ ಎಂದರು.

ಈ ವೇಳೆ ಎನ್ಇಪಿ ವಿಚಾರವಾಗಿ ಮಾತನಾಡಿದ ಜೈರಾಮ್ ರಮೇಶ್ ಅವರು, ‘1996ರಲ್ಲಿ ಜಾರಿಗೆ ತಂದ ಶಿಕ್ಷಣ ನೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆಗಳನ್ನು ಆರಂಭಿಸಲಾಗಿತ್ತು. ಅಲ್ಲಿ ಎಲ್ಲ ವರ್ಗದವರು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದು, ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು ಶಿಕ್ಷಣದ ಖಾಸಗಿಕರಣ ಬಹಳ ಅಪಾಯಕಾರಿ’ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ