ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದರೆ ಜೆಡಿಎಸ್ನ 18 ಶಾಸಕರ ಬೆಂಬಲ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ಕೇಳಿರಬಹುದು. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರಲು ಸಾಧ್ಯವಿಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿಯವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎಂದರೆ ಅದಕ್ಕೆ ಇದೇ ಕಾರಣ. ಒಂದು ವೇಳೆ ಜೆಡಿಎಸ್ ಅವರಿಗೆ ಬೆಂಬಲ ನೀಡಿದರೂ ನಾನು ಈ ವಿಚಾರದಲ್ಲಿ ತಟಸ್ಥನಾಗಿರುತ್ತೇನೆಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಬಿಜೆಪಿಯ ಆಂತರಿಕ ವಿಷಯ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಇನ್ನೂ ಏನೇನು ಬೆಳವಣಿಗೆ ಆಗುತ್ತೆ ಕಾದು ನೋಡೋಣ ಎಂದು ತಿಳಿಸಿದರು.
ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ ಪ್ರತಿಯಿಸಿ, ಸದನದಲ್ಲಿ ಸುನಿಲ್ ಕುಮಾರ್ ಹಾಗೂ ರಾಜಣ್ಣ ಈ ವಿಚಾರ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣಕ್ಕೆ ಇತಿಹಾಸ ಇದೆ. ಇತ್ತೀಚಿನ ದಿನಗಳ ಘಟನೆ ನೋಡಿದ್ರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದರು.




