ದೇಶದ ಹಲವೆಡೆ ಹಿಂದೂ- ಮುಸ್ಲಿಮರ ನಡುವೆ ದ್ವೇಷ ಬಿತ್ತುತ್ತಿರುವ ಸಂದರ್ಭದ ಮಧ್ಯೆಯೂ ಹಲವೆಡೆ ಹಿಂದೂ-ಮುಸಲ್ಮಾನರು ಜೊತೆಗೂಡಿ ಹಲವು ಧಾರ್ಮಿಕ ಹಬ್ಬಗಳನ್ನು ಒಂದುಗೂಡಿ ಆಚರಿಸುವ ಮೂಲಕ ಭಾವೈಕ್ಯತೆ ಸಾರಿರುವ ಹಲವು ಪ್ರಕರಣಗಳನ್ನು ನೋಡಿದ್ದೇವೆ.
ಮಂಡ್ಯ ನಗರದ ಕೆರೆಯಂಗಳದ ಬೀಡಿ ಕಾಲನಿಯಲ್ಲಿ ಹಿಂದೂ-ಮುಸಲ್ಮಾನ ಬಂಧುಗಳು ಒಂದುಗೂಡಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಿಂದು-ಮುಸ್ಲಿಂ ಸಹೋದರತ್ವಕ್ಕೆ ಸಾಕ್ಷಿಯಾಗಿದ್ದಾರೆ.

ಗಣೇಶ ಚತುರ್ಥಿ ಆಚರಣೆಯ ಹಿನ್ನಲೆಯಲ್ಲಿ ಇಂದು
ಹಿಂದೂ-ಮುಸ್ಲಿಮರು ಜೊತೆಗೂಡಿ ಗಣಪನಿಗೆ ಪೂಜೆ ನೆರವೇರಿಸಿದರು. ಪೂಜೆಗೆ ಸಿದ್ಧಪಡಿಸಿದ್ದ ನೈವೇದ್ಯವನ್ನು ಹಿಂದೂ- ಮುಸ್ಲಿಂ ಸಮುದಾಯದವರು ಪರಸ್ಪರ ತಿನ್ನಿಸುವ ಮೂಲಕ ಸಂಭ್ರಮ ಪಟ್ಟರು.
ನಮ್ಮ ನಡುವೆ ಯಾವುದೇ ವೈರತ್ವವಿಲ್ಲವೆಂದು ಸಾರಿದ್ದಲ್ಲದೆ,ನಾವೆಲ್ಲಾ ಒಂದೇ ತಾಯಿಯ ಮಕ್ಕಳೆಂದು ದೇಶಕ್ಕೆ ತೋರಿಸಿ ಕೊಟ್ಟರು.
ಎಸ್ಪಿ ಯತೀಶ್ ಭೇಟಿ
ಹಿಂದೂ- ಮುಸಲ್ಮಾನ ಬಂಧುಗಳು ಒಂದುಗೂಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಬೀಡಿ ಕಾಲೋನಿಗೆ ಭೇಟಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್.ಯತೀಶ್,ಭಾವೈಕ್ಯತೆಯ ಸಂಕೇತವಾಗಿ ಗಣೇಶ ಪ್ರತಿಷ್ಠಾಪನೆ ಮಾಡಿರುವ ಹಿಂದೂ-ಮುಸ್ಲಿಂ ಎರಡೂ ಸಮುದಾಯದವರಿಗೆ ಶುಭ ಕೋರಿದರು.
ಗಣೇಶ ಚತುರ್ಥಿಯನ್ನು ಹಿಂದೂ- ಮುಸ್ಲಿಮರು ಜೊತಗೂಡಿ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.ಇದು ಎಲ್ಲರೂ ಸಂಭ್ರಮಿಸ ಬೇಕಾದ ಸಂಗತಿ ಎಂದರು.
ನಗರಸಭೆ ಸದಸ್ಯರಾದ ನಯೀಂ,ಜಾಕೀರ್ ಪಾಷ ಮತ್ತಿತರರಿದ್ದರು.




