Sunday, October 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ಗಾಂಧಿ ಗ್ರಾಮ’ಕ್ಕೀಗ ಹೊಸ ಆಕರ್ಷಣೆ ; ಕಲಾವಿದರ ಕೈಯಲ್ಲಿ ಜೀವ ತಳೆದ ಗಾಂಧಿ ಶಿಲ್ಪ

ಮಹಾತ್ಮ ಗಾಂಧೀಜಿ ಅವರ ಸ್ಮರಣೆ ಮತ್ತು ಸಂದೇಶವನ್ನು ಪಸರಿಸುವ ಮತ್ತು ಮುಂದಿನ ಪೀಳಿಗೆಗೆ ಶಾಶ್ವತಗೊಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ‘ಗಾಂಧಿ ಗ್ರಾಮ’ಕ್ಕೀಗ ಹೊಸ ಆಕರ್ಷಣೆ. ‘ಅರೆನಗ್ನ ಫಕೀರ’ನ ಹತ್ತಾರು ಶಿಲ್ಪಗಳು ಕಲಾವಿದರ ಕೈಯಲ್ಲಿ ಜೀವ ತಳೆದಿದ್ದು ಸ್ಫೂರ್ತಿಯ ತಾಣವಾಗಿ ರೂಪಾಂತರಗೊಂಡಿದೆ.

ಅಂದ್ಹಾಗೆ, ‘ಗಾಂಧಿ ಗ್ರಾಮ’ ಇರುವುದು ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಹೊರವಲಯದಲ್ಲಿ. ಮಂಡ್ಯ ನಗರಕ್ಕೆ 10 ಕಿ.ಮೀ. ದೂರುದಲ್ಲಿದೆ. ಆ. 16ರಿಂದ ನಡೆಯುತ್ತಿರುವ ಶಿಬಿರದಲ್ಲಿ ಗಾಂಧೀಜಿಯವರ ವ್ಯಕ್ತಿವಿಚಾರ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳು ಕಲಾವಿದರ ಕೈಯಲ್ಲಿ ಅರಳಿದ್ದು, ಗಾಂಧಿ ಪ್ರತಿಮೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಕಲಾವಿದರು ಹಗಲು-ರಾತ್ರಿ ಎನ್ನದೆ ಅವಿರತವಾಗಿ ದುಡಿದು ಗಾಂಧಿ
ವಿಚಾರಗಳಿಗೆ ಮೂರ್ತರೂಪ ನೀಡಿದ್ದಾರೆ. ಕಲಾವಿದರ ಶ್ರಮ ಶಿಲ್ಪಗಳಲ್ಲಿ ಪ್ರತಿಫಲಿಸಿದೆ.

ನಮ್ಮ ಕಲಾವಿದರು ಹಗಲು-ರಾತ್ರಿ ಎನ್ನದೆ ತುಂಬಾ ಅಸ್ಥೆಯಿಂದ ಶ್ರಮಿಸಿದ್ದಾರೆ. ನಮ್ಮ
ಶ್ರಮವನ್ನು ಸಾರ್ಥಕಗೊಳಿಸುವಂತೆ ಶಿಲ್ಪಗಳು ಅರಳಿದ್ದು ತೃಪ್ತಿ ತಂದಿದೆ.

– ಕೆ.ನಾರಾಯಣರಾವ್, ಶಿಬಿರದ ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಂಡ್ಯದ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ (ರಿ), ಸಹಯೋಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೆ.ನಾರಾಯಣರಾವ್ ಮಾರ್ಗದರ್ಶನದಲ್ಲಿ ಕಳೆದ 15 ದಿನಗಳಿಂದ ಶಿಬಿರ ನಡೆಯುತ್ತಿದೆ. ಹಸಿರು ಐಸಿರಿಯ ಮಧ್ಯೆ ಗಾಂಧೀ ಶಿಲ್ಪಕಲಾಕೃತಿಗಳು ಸ್ಥಾಪನೆಗೊಂಡಿವೆ. ಶಿಬಿರಕ್ಕೆ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರಾದ ವೈ.ಕುಮಾರ್ ಕಾರ್ಯನಿರ್ವಹಿಸಿದರು.

ಏನೇನಿದೆ

‘ಗಾಂಧಿ ಗ್ರಾಮ’ವನ್ನು ಪ್ರವೇಶಿಸುತ್ತಿದ್ದಂತೆ ಧ್ಯಾನಸ್ಥ ಸ್ಥಿತಿಯಲ್ಲಿರುವ 10 ಎತ್ತರ ಗಾಂಧಿ ಶಿಲ್ಪ ನಮ್ಮನ್ನು ಎದುರುಗೊಳ್ಳುತ್ತದೆ. ಇಡೀ ಶಿಲ್ಪ ಮನೋಹಕವಾಗಿದ್ದು ಗಮನ ಸೆಳೆಯುತ್ತದೆ. ಹಾಗೇ ಬಲಕ್ಕೆ ತಿರುಗಿದರೆ ದಂಡಿಯಾತ್ರೆ (ಉಪ್ಪಿನ ಸತ್ಯಾಗ್ರಹ)ಯ ಸಿಮೆಂಟ್ ಕಲಾಕೃತಿಗಳು ನಮ್ಮನ್ನು ಸ್ವಾಗತಿಸುತ್ತವೆ. ಧ್ಯಾನಸ್ಥ ಗಾಂಧಿ ಶಿಲ್ಪದ ಹಿಂಭಾಗದ ಅನತಿ ದೂರದಲ್ಲಿ ‘ಗಾಂಧಿ ಮತ್ತು ಕಸ್ತೂರಬಾ ಗಾಂಧಿ ಅವರು ಚರ್ಚೆಯಲ್ಲಿ ತೊಡಗಿರುವುದು ಹಾಗೂ ‘ಗಾಂಧಿ ಅವರೊಂದಿಗೆ ಅಭ ಮತ್ತು ಮನು’ ಶಿಲ್ಪಗಳಿದ್ದು ಆಕರ್ಷಿಸುತ್ತವೆ.

ಗಾಂಧೀಜಿ ಅವರ ಶಿಲ್ಪಗಳು ‘ಗಾಂಧಿ ಗ್ರಾಮ’ಕ್ಕೆ ಮೆರಗು ನೀಡಿವೆ. ಗಾಂಧಿ ಅವರ ಜೀವನದ
ವಿಚಾರಗಳನ್ನು ಅರಿತುಕೊಳ್ಳಲು ಪೂರಕವಾಗುವಂತೆ ‘ಗಾಂಧಿ ಗ್ರಾಮ’ವನ್ನು ಸ್ಫೂರ್ತಿಯ
ಸ್ಥಳವಾಗಿ ರೂಪಿಸುವ ಯೋಜನೆ ಹೊಂದಿದ್ದೇವೆ.

-ಮಧು ಜಿ.ಮಾದೇಗೌಡ, ಶಾಸಕ ಹಾಗೂ ಅಧ್ಯಕ್ಷ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್

‘ದಂಡಿಯಾತ್ರೆ’ಯ ಶಿಲ್ಪವಿರುವ ರಸ್ತೆಯಲ್ಲಿಯೇ ಸ್ವಲ್ಪ ದೂರು ಮುಂದೆ ಸಾಗಿದರೆ, ರಸ್ತೆ ಕವಲೊಡೆಯುವ ತಿರುವುಗಳಲ್ಲಿ ರವೀಂದ್ರನಾಥ ಠ್ಯಾಗೂರ್ ಮತ್ತು ಗಾಂಧೀಜಿ ಅವರ ಭೇಟಿಯಾದ ವೇಳೆ ಪರಸ್ಪರರು ಕೈಮುಗಿಯುತ್ತಿರುವುದು; ಜವಹರಲಾಲ್ ನೆಹರು ಮತ್ತು ಗಾಂಧೀಜಿ ಕುಳಿತು ಸಂಭಾಷಣೆಯಲ್ಲಿ ತೊಡಗಿರುವುದು; ‘ಗಾಂಧಿ ಪ್ರೀತಿಯಲ್ಲಿ ಪೌರಕಾರ್ಮಿಕ ಮಗು’; ‘ಮಗು ಮತ್ತು ಗಾಂಧಿ’ ಇರುವ ಶಿಲ್ಪಗಳು ಆಕರ್ಷಕವಾಗಿದ್ದು ಮನಸೂರೆಗೊಳ್ಳುತ್ತವೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ, ‘ಕೆಟ್ಟದನ್ನು ನೋಡಬೇಡ, ‘ಕೇಳಬೇಡ’, ‘ಮಾತನಾಡಬೇಡ’ ಎನ್ನುವ ಮೂರು ಕೋತಿಗಳು; ‘ಗೋವು ಮತ್ತು ಗಾಂಧೀಜಿ’; ‘ಚರಕ ಸುತ್ತುತ್ತಾ ನೂಲು ತೆಗೆಯುತ್ತಿರುವ ಗಾಂಧೀಜಿ’ ಹಾಗೂ ‘ಗಾಂಧಿ ಗ್ರಾಮ’ ನಿರ್ಮಾಣದ ಕನಸು ಕಂಡಿದ್ದ, ಇದರ
ಪ್ರೇರಕಶಕ್ತಿಯಾದ ಜಿ.ಮಾದೇಗೌಡರ ಪುತ್ಥಳಿ ಎದುರುಗೊಳ್ಳುತ್ತದೆ.

ಎಲ್ಲೆಲ್ಲಿಂದ ಶಿಲ್ಪಿಗಳು ಬಂದಿದ್ದಾರೆ

ಶಿವಮೊಗ್ಗ, ಧಾರವಾಡ, ಕೊಪ್ಪಳ, ಮೈಸೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬೀದರ್,
ರಾಯಚೂರು, ಕಲಬುರಗಿ, ಯಾದಗಿರಿ, ಬೆಂಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ
ಒಟ್ಟು 22 ಮಂದಿ ಹಿರಿಯ ಶಿಲ್ಪಿಗಳು ಮತ್ತು 18 ಮಂದಿ ಸಹಾಯಕ ಶಿಲ್ಪಿಗಳು
ಭಾಗವಹಿಸಿದ್ದಾರೆ.

ಹಿರಿಯ ಶಿಲ್ಪಿಗಳು

ಸಿ.ವಿ.ರಾಮಕೃಷ್ಣ, ಶ್ರೀನಾಥ್ ಚಿತ್ರಗಾರ್, ವಿನಾಯಕ ಕೆ, ರಾಜೇಂದ್ರ ಬಿ.ಎಂ., ಪರಶುರಾಮ ಎಚ್., ವೆಂಕಟೇಶ್ ಎಂ., ಮರಿಯಪ್ಪ ಡಿ.ಹೊನ್ನಮ್ಮನವರ, ರಘು ಎಂ., ರವಿ.ಎಚ್.ಎಲ್., ನಾಗರಾಜ್ ಎಂ.ಬಡಿಗೇರ., ಕುಮಾರಸ್ವಾಮಿ, ಪ್ರವೀಣ್ ಕೆ.ಓ., ವೀರೇಂದ್ರ ಎಸ್.ಪಾಟೀಲ್, ಗೌರಿಶಂಕರ ಬಿ.ಜಿ., ಹನಮಂತ ಸಿದ್ದಪ್ಪ ಮುಂಡರಗಿ, ಸಿ.ವಿ.ಪಾಂಡುರಂಗ, ಹನುಮಂತ ಎಸ್.ಮೀರಗಳೆ, ಮಂಜುನಾಥ ಟಿ., ಗಣೇಶ್ ಅಂಬಿಗೇರಿ, ದೇವಪ್ಪ ರಾಮಲಿಂಗಪ್ಪ

ಕಿರಿಯ ಶಿಲ್ಪಿಗಳು

ಆರ್.ಮುದುಕಪ್ಪ, ದಾದಪೀರ್ ಮಾಮದಲಿ, ಎಸ್.ಮಧು, ಎಂ.ಮೋಹನ್, ಆರ್.ಆಕಾಶ್,
ವೈ.ಗಂಗಾಧರ್, ಜೆ.ಸಚಿನ್, ವಿ.ವೇಣುಗೋಪಾಲ್, ಎಂ.ಚೇತನ್, ದೇವೇಂದ್ರಪ್ಪ ಬಿ.ಹಂದ್ರಾಳ,
ಕಿರಣ್ ಬಾಲಾಜಿ, ಕುಮಾರಸ್ವಾಮಿ, ಬಿ.ಜತೀನ್, ಶಿವಕುಮಾರ್, ಸಂಗಣ್ಣ ಪರಸಪ್ಪ ಗೋರೆಬಾಳ,
ಸುನೀಲ್ ಕುಮಾರ್, ಮಲ್ಲಿಕಾರ್ಜುನ, ಎಸ್.ಡಿ.ಮಣಿಕಂಠ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!