ಮಂಡ್ಯ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಸೌಹಾರ್ದತೆಯ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಮಾಡೋಣ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿ.ಪಂ.ಕಾವೇರಿ ಸಭಾಂಗಣದಲ್ಲಿ ನಡೆದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಸಂಬಂಧ ಸೌಹರ್ದತೆ ಸಭೆ ನಡೆಸಿ ಮಾತನಾಡಿದರು. ಹಬ್ಬಗಳ ಆಚರಣೆಗೂ ಸಹ ಸರ್ಕಾರದಿಂದ ಹೊರಡಿಸಿರುವ ನಿಯಮ ಹಾಗೂ ಮಾರ್ಗದರ್ಶನಗಳಿರುತ್ತದೆ. ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಉಚ್ಛ ನ್ಯಾಯಾಲಯ ಈಗಾಗಲೇ ಆದೇಶ ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣ ಲೇಪಿತ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವಂತಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜನನ ಜೇಡಿ ಮಣ್ಣಿನಲ್ಲಿ ನಿರ್ಮಾಣ ಮಾಡಿರುವ ಮುದ್ದಾದ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿಗೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಅನುಮತಿ ನೀಡಲಾಗುತ್ತಿದೆ. ಅರ್ಜಿಯಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳವನ್ನು ಸಹ ನಮೂದಿಸುವುದು ಕಡ್ಡಾಯವಾಗಿರುತ್ತದೆ ಎಂದರು.
ಗಣಪತಿಯನ್ನು ಸ್ಥಳೀಯ ಸಂಸ್ಥೆಗಳು ವಿಸರ್ಜನೆ ಮಾಡಲು ನಿಗದಿಮಾಡಿರುವ ಸ್ಥಳದಲ್ಲಿ ವಿಸರ್ಜನೆ ಮಾಡಿ. ಅಲಂಕಾರಕ್ಕೆ ಬಳಸುವ ವಸ್ತುಗಳನ್ನು ಬೇರ್ಪಡಿಸಿ ವಿಸರ್ಜನೆ ಮಾಡಿ. ಪ್ಲಾಸ್ಟಿಕ್ ವಸ್ತುಗಳನ್ನು ಅಲಂಕಾರಕ್ಕೆ ಬಳಸಬೇಡಿ ಎಂದು ಮನವಿ ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮುಗಲಭೆಗಳು ಇದುವರೆಗೂ ನಡೆದಿಲ್ಲ ಇನ್ನು ಮುಂದೆಯೂ ಕೂಡ ಅಂತಹ ಸಂಗತಿಗಳಿಗೆ ಅವಕಾಶ ಕೊಡದಂತೆ ಹಬ್ಬ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ, ಪರಸ್ಪರವಾಗಿ, ಪ್ರತಿಯೊಬ್ಬರ ಸಹಭಾಗಿತ್ವ ಸಹಕಾರದಿಂದ ಪ್ರತಿಯೊಬ್ಬರೂ ಅಣ್ಣ-ತಮ್ಮಂದಿರು ಎಂಬ ಭಾವನೆಯಿಂದ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು.
ಧ್ವನಿವರ್ಧಕಗಳಲ್ಲಿ ಧ್ವನಿ 30 ಡೆಸಿಬಲ್ ಮಾತ್ರ ಇರಬೇಕು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಿಲ್ಲ. ಈಗೆ ಹಲವಾರು ನಿಯಮಗಳಿವೆ. ನಿಯಮಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಯೊಬ್ಬರೂ ಪರಸ್ಪರ ಸಹಕಾರದಿಂದ ಹಬ್ಬ ಆಚರಿಸಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಈ 2 ಹಬ್ಬಗಳು ಕೂಡ ಪ್ರಮುಖವಾದ ಧಾರ್ಮಿಕ ಹಬ್ಬ ಆಗಿರುವುದರಿಂದ ಧರ್ಮಗಳಲ್ಲಿ ಬೇಧ-ಭಾವ ಮಾಡದೆ ಪರಸ್ಪರ ಸಹಕಾರದಿಂದ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು.
ಗಣಪತಿ ವಿಸರ್ಜನೆಗೆ ನಗರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸುವ ಸ್ಥಳದಲ್ಲಿ ವಿಸರ್ಜನೆ ಮಾಡಬೇಕು. ಗ್ರಾಮ ಪಂಚಾಯಿತಿ ಹಂತದಲ್ಲಿ ಯಾವ ಸಹಾಯ ಸಹಕಾರ ಬೇಕು ಅದನ್ನು ನೀಡಲಾಗುವುದು. ಜಿಲ್ಲೆಗೆ ಅಥವಾ ಜಿಲ್ಲೆಯ ಜನಗಳಿಗಾಗಲೀ ಯಾವುದೇ ರೀತಿಯ ಕಪ್ಪು ಚುಕ್ಕೆ ಬರದಂತೆ ಹಬ್ಬಗಳ ಆಚರಣೆ ಮಾಡಿ ಎಂದು ಹೇಳಿದರು.
ಆದೇಶದನ್ವಯ ಹಬ್ಬ ಆಚರಣೆ
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಎರಡು ಹಬ್ಬಗಳು ಜೊತೆ ಜೊತೆಗೆ ಬಂದಿರುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ, ಗೊಂದಲಮಯ ವಾತಾವರಣ ಸೃಷ್ಟಿ ಮಾಡದಂತೆ ಎಚ್ಚರಿಕೆ ವಹಿಸಿ ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.
ಅನುಮತಿ ಇಲ್ಲದ ಕಡೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ. ಮೆರವಣಿಗೆ ಹೋಗುವ
ರೂಟ್ ಮ್ಯಾಪ್ ನ್ನು ಪೊಲೀಸ್ ಇಲಾಖೆಗೆ ಒದಗಿಸಬೇಕು. ಕೆಲವು ವಿವಾದಾತ್ಮಕ ಸ್ಥಳಗಳಿರುತ್ತವೆ, ಆ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪಿಸುವ ಬದಲು ಬೇರೆ ಸ್ಥಳಗಳನ್ನು ಆಯ್ಕೆ ಮಾಡಿ ಎಂದರು
ಮಂಟಪ ಹಾಕುವ ಸಮಯದಲ್ಲಿ ಸರಿಯಾದ ಜಾಗ ಆಯ್ಕೆ ಮಾಡಬೇಕು, ವಿಗ್ರಹವು 5 ಅಡಿಗಿಂತ ಹೆಚ್ಚಿದ್ದರೆ ಮೆರವಣಿಗೆ ಹೋಗುವ ಸಮಯದಲ್ಲಿ ಕರೆಂಟ್ ವೈರ್ ಗಳಿಗೆ ಮಾವಿನ ತೋರಣಗಳು ತಗುಲಿ ಕೆಲವೊಂದು ಕಡೆ ಅಹಿತಕರ ಘಟನೆಗಳು ಸಂಭವಿಸಬಹುದು. ಕತ್ತಲಲ್ಲಿ ಗಣಪತಿ ವಿಸರ್ಜನೆ ಮಾಡುವಾಗ ನೀರಿನಲ್ಲಿ ಮುಳುಗುವ ಅವಘಡ ಸಂಭವಿಸಬಹುದು ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ ಎಂದರು.
ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು.
ನೈಸರ್ಗಿಕವಾಗಿ ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಟ್ಯಾಂಕ್ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗುವುದು ಅದರಂತೆ ಪರಿಸರ, ಜಲ ಮಾಲಿನ್ಯ ಮಾಡದೆ ಕಸವನ್ನು ವಾಹನದಲ್ಲಿ ಹಾಕಬೇಕು ಎಂದರು.
ಸಾರ್ವಜನಿಕವಾಗಿ ಇಡಲಾಗುವ ಗಣೇಶ ಮೂರ್ತಿಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸುವುದು. ಈ ಅನುಮತಿ ಪತ್ರಗಳಲ್ಲಿ ಲೈಸನ್ಸ್ ನೀಡುವ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸುವುದು ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕಗಳ ಬಳಕೆ ನಿಷೇಧಿಸಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾದಿತು ಎಂದು ಎಚ್ಚರಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿ.ವೈ.ಎಸ್.ಪಿ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




