Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಶೀಘ್ರ ನ್ಯಾಯದಾನಕ್ಕೆ ಪೂರಕ ಸಹಕಾರ ನೀಡಿ: ನ್ಯಾ. ಮಹೇಶ್

ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಶೀಘ್ರ ನ್ಯಾಯದಾನಕ್ಕೆ ವಕೀಲರು ನ್ಯಾಯಾಧೀಶರಿಗೆ ಪೂರಕವಾಗಿ ಸಹಕಾರ ನೀಡಿ ಕೆಲಸ ಮಾಡಬೇಕು ಎಂದು ಪಾಂಡವಪುರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಮಹೇಶ್ ತಿಳಿಸಿದರು.

ಕೃಷ್ಣರಾಜಪೇಟೆ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯಕ್ಕೆ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸುಧೀರ್ ಮತ್ತು ಅಪರ ಸಿವಿಲ್ ನ್ಯಾಯಾಧೀಶ ದೇವರಾಜ್ ಅವರನ್ನು ಸ್ವಾಗತಿಸಿ ನೂತನ ನ್ಯಾಯಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷ್ಣರಾಜಪೇಟೆ ನ್ಯಾಯಾಲಯದಲ್ಲಿ 4,500ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ, ಈ ದಿಕ್ಕಿನಲ್ಲಿ ಶೀಘ್ರವಾಗಿ ಕಕ್ಷೀದಾರರಿಗೆ ನ್ಯಾಯವನ್ನು ಒದಗಿಸಿಕೊಡುವ ದಿಕ್ಕಿನಲ್ಲಿ ವಕೀಲರು ಬದ್ಧತೆಯಿಂದ ವಾದ ಮಂಡಿಸಿ ಶೀಘ್ರ ನ್ಯಾಯದಾನಕ್ಕೆ ನ್ಯಾಯಾಧೀಶರಿಗೆ ಪೂರಕ ಸಹಕಾರವನ್ನು ನೀಡಿ ಕೆಲಸ ಮಾಡಬೇಕು. ರಾಜ್ಯ ಉಚ್ಚ ನ್ಯಾಯಾಲಯವು ಅತಿ ಶೀಘ್ರದಲ್ಲಿಯೇ ಕೆ.ಆರ್.ಪೇಟೆ ಪಟ್ಟಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯವನ್ನು ಆರಂಭ ಮಾಡುವ ಸಾಧ್ಯತೆ ಇದೆ. ನೀವು ಶ್ರೀರಂಗಪಟ್ಟಣದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ಕೇಸುಗಳಿಗಾಗಿ ಅಲೆದಾಡುವ ಅಗತ್ಯವು ಸದ್ಯದಲ್ಲೇ ನಿಲ್ಲಲಿದೆ. ಆದ್ದರಿಂದ ವಕೀಲರು ನ್ಯಾಯವನ್ನು ಅರಸಿ ನ್ಯಾಯಾಲಯಕ್ಕೆ ಬರುವ ಬಡ ಕಕ್ಷಿದಾರರಿಗೆ ಶೀಘ್ರವೇ ನ್ಯಾಯ ದೊರಕುವ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದರು.

ನ್ಯಾಯಾಧೀಶರಾದ ಸುಧೀರ್ ಮತ್ತು ದೇವರಾಜು ಮಾತನಾಡಿ, ಈವರೆಗೆ ನ್ಯಾಯಾಧೀಶರಾಗಿ ಕೆಲಸ ಮಾಡಿರುವ ನ್ಯಾಯಾಧೀಶರುಗಳಿಗೆ ನೀಡಿರುವಂತೆ ತಮಗೂ ಕೆಲಸ ಮಾಡಲು ವಕೀಲರ ಸಂಘ ಹಾಗೂ ವಕೀಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಕೀಲರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ವರ್ಗಾವಣೆಗೊಂಡು ಆಗಮಿಸಿರುವ ನೂತನ ನ್ಯಾಯಾಧೀಶರುಗಳಿಗೆ ತಮ್ಮನ್ನು ಪರಸ್ಪರ ಪರಿಚಯ ಮಾಡಿಕೊಂಡರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ, ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುವ ವಕೀಲರೆಲ್ಲರೂ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದಿರುವ ಯುವಕರಾಗಿದ್ದಾರೆ, ವಾದ ಮಂಡನೆ ಹಾಗೂ ಪ್ರಕರಣಗಳ ಇತ್ಯರ್ಥದ ಸಂದರ್ಭದಲ್ಲಿ ವಕೀಲರುಗಳಿಂದ ಸಣ್ಣಪುಟ್ಟ ಲೋಪ ದೋಷಗಳಾದರೆ, ಅವರನ್ನು ತಿದ್ದಿ ತೀಡಿ ಪೂರಕವಾದ ಸಹಕಾರ ನೀಡಿ ಕೆಲಸ ಮಾಡಲು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ, ಸರ್ಕಾರಿ ಅಭಿಯೋಜಕ ಸುರೇಂದ್ರ, ಹಿರಿಯ ವಕೀಲರಾದ ಎಸ್.ಸಿ. ವಿಜಯಕುಮಾರ್, ಜಿ.ಆರ್. ಅನಂತರಾಮಯ್ಯ, ವಕೀಲರ ಸಂಘದ ಕಾರ್ಯದರ್ಶಿ ರಾಜೇಗೌಡ ಸಭೆಯಲ್ಲಿ ಮಾತನಾಡಿದರು. ವಕೀಲರ ಸಂಘದ ಪದಾಧಿಕಾರಿಗಳಾದ ದಿನೇಶ್, ಡಿ.ಆರ್.ಜಗಧೀಶ್, ನಿರಂಜನ, ಸುಜಾತ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ