ಡಿಸೆಂಬರ್ 21 ರಿಂದ 24 ರವರೆಗೆ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 3 ದಿನಗಳ ಕಾಲ ಹಾಗೂ ನಗರ ಪ್ರದೇಶದಲ್ಲಿ 4 ದಿನಗಳ ಕಾಲ ಪಲ್ಸ್ ಪೋಲಿಯೋ ಅಭಿಯಾನ ನಡೆಸಲಾಗುತ್ತಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಜಿಲ್ಲೆಯಲ್ಲಿನ ಒಂದು ವರ್ಷದಿಂದ 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಿ ಎಂದು ಮಂಡ್ಯ ವಿಧಾನ ಸಭಾ ಕ್ಷೇತ್ರ ಶಾಸಕ ಪಿ. ರವಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಆಡಳಿತ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಮಂಡ್ಯ ನಗರದ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮತನಾಡಿದರು.
ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಶಾಶ್ವತವಾಗಿ ಅಂಗ ವೈಪಲ್ಯಯತೆಯಿಂದ ಮುಕ್ತ ಮಾಡಬಹುದು. ಮುಂದೆ ಯಾವುದೇ ರೀತಿಯ ಅಂಗ ವೈಫಲ್ಯಯತೆ ಮಕ್ಕಳಿಗೆ ಕಾಡದಿರಲು ಸರ್ಕಾರದೊಂದಿಗೆ ಕೈ ಜೋಡಿಸಿ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೊಳಿಸಿ ಹಾಗೂ ಕೂಡಲೇ ನಿಮ್ಮ ಹತ್ತಿರದ ಅಭಿಯಾನದಲ್ಲಿ ಮಕ್ಕಳಿಗೆ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆರ್ ನಂದಿನಿ ಮಾತನಾಡಿ, ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವುದು ಎಲ್ಲರ ಜವಬ್ದಾರಿಯಾಗಿದ್ದು, ಜಿಲ್ಲೆಯ ಎಲ್ಲಾ ಮಕ್ಕಳನ್ನು ಪೋಲಿಯೋ ಲಸಿಕೆಗೆ ಒಳಪಡಿಸಿ ಎಂದರು.
ಭಾರತದ ಈಗಾಗಲೇ ಪೋಲಿಯೋ ಮುಕ್ತ ದೇಶವಾಗಿದ್ದು, ಆದರೆ ಇತರೆ ದೇಶಗಳಲ್ಲಿ ಪೋಲಿಯೋ ಸೋಂಕು ಇರುವುದರಿಂದ ಮಕ್ಕಳ ಹಿತಾಸಕ್ತಿಗಾಗಿ ಸರ್ಕಾರ ಪೋಲಿಯೋ ಅಭಿಯಾನ ನಡೆಸಿಕೊಂಡು ಬರುತ್ತಿದೆ. ಎರಡು ಹನಿ ಮಕ್ಕಳ ಅಂಗ ವೈಫಲ್ಯತೆ ತಪ್ಪಿಸಿ ಮಕ್ಕಳ ಸರ್ವತೋಮುಖ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಹತ್ತಿರದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ತಪ್ಪದೆ ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಮಿಮ್ಸ್ ನಿರ್ದೇಶಕ ಡಾ.ಪಿ ನರಸಿಂಹಸ್ವಾಮಿ, ಆರ್. ಸಿ.ಹೆಚ್ ಅಧಿಕಾರಿ ಡಾ.ಕೆ.ಪಿ.ಅಶ್ವತ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಜವರೇಗೌಡ, ನಗರಸಭಾ ಆಯುಕ್ತರಾದ ಪಂಪಶ್ರೀ ಮತ್ತು ಸೇರಿದಂತೆ ಇನ್ನಿತರರು ಹಾಜರಿದ್ದರು .




