Friday, November 20, 2026

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನದಲ್ಲೂ ಸದ್ದು ಮಾಡಿದ ಬೆಳಗಾವಿ ಪ್ರಕರಣ | ಸಿ.ಟಿ.ರವಿ ವಿರುದ್ದ ಪ್ರತಿಭಟನೆ – ಗೋ ಬ್ಯಾಕ್ ಘೋಷಣೆ

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ದ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲೂ ಪ್ರತಿಭಟನೆ ವ್ಯಕ್ತವಾಗಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಮಹಾದ್ವಾರದ ಬಳಿ ಶನಿವಾರ ಜಮಾಯಿಸಿದ ವಿವಿಧ ಮಹಿಳಾ ಸಂಘಟನೆಗಳ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ‘ ಗೋ ಬ್ಯಾಕ್ ಸಿ.ಟಿ.ರವಿ’ ಘೋಷಣೆ ಕೂಗಿ, ಮಹಿಳಾ ಪೀಡಕರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಬೆಳಿಗ್ಗೆ 11 ಗಂಟೆಗೆ ಪ್ರಧಾನ ವೇದಿಕೆಯಲ್ಲಿ ನಡೆಯಲಿರುವ ‘ಸಾಹಿತ್ಯದಲ್ಲಿ ರಾಜಕೀಯ; ರಾಜಕೀಯದಲ್ಲಿ ಸಾಹಿತ್ಯ’ ಗೋಷ್ಠಿಯಲ್ಲಿ ಬಿಜೆಪಿ ಮುಖಂಡ, ಎಂಎಲ್,ಸಿ ಸಿ ಟಿ ರವಿ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನು ವಿರೋಧಿಸಿದ ವಿವಿಧ ಸಂಘಟನೆಗಳು ಸಮ್ಮೇಳನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದವು.

‘ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವು’ ವಿಷಯದ ಬಗ್ಗೆ ಸಿ ಟಿ ರವಿ ಪ್ರಬಂಧ ಮಂಡಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ವಹಿಸಲಿದ್ದಾರೆ. ಬಿ ಎಲ್ ಶಂಕರ್ ಆಶಯ ಭಾಷಣ ಮಾಡಲಿದ್ದರೂ, ಆದರೆ ಮಧ್ಯಾಹ್ನವಾದರೂ ಸಿ.ಟಿ.ರವಿ ಗೋಷ್ಠಿಯಲ್ಲಿ ಪತ್ತೆ ಇರಲಿಲ್ಲ.

ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, “ಸಂವಿಧಾನ ವಿರೋಧಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಅದನ್ನು ವಿರೋಧಿಸಿದ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಸಿ ಟಿ ರವಿ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿಯಾಗಿ ಭಾಷಣ ಮಾಡುವುದನ್ನು ಕೇಳಿಸಿಕೊಳ್ಳಲು ಮಂಡ್ಯದ ಜನ ಕಾದು ಕೂತಿಲ್ಲ. ಅವರ ಭಾಷಣ ಸಾಹಿತ್ಯಾಸಕ್ತರಿಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.

ಮಂಡ್ಯ ಹಲವು ದಾರ್ಶನಿಕರು ಮಹನೀಯರನ್ನು ಕಂಡ ಜಿಲ್ಲೆ ಕುವೆಂಪು ಅವರ ವೈಚಾರಿಕತೆ, ಸಾಮರಸ್ಯವನ್ನು ಮೈಗೂಡಿಸಿಕೊಂಡು ಸಮಸಮಾಜವನ್ನು ಕಟ್ಟಬೇಕೆಂಬ ಕನಸು ಹೊತ್ತು ಪ್ರೀತಿ ಮಾನವತೆಗಳನ್ನು ಹಂಚುತ್ತಾ ಹೆಸರಾಗಿರುವ ಜಿಲ್ಲೆ, ಅಂಬೇಡ್ಕರ್ ಎಂದರೆ ಈ ನೆಲದ ಉಸಿರು, ಅಸ್ತಿತ್ವ ಎಂದು ಧ್ವನಿ ಎತ್ತರಿಸುವ ಜಿಲ್ಲೆ ಇಂತಹ ಜಾಗಕ್ಕೆ ಕೋಮುಕ್ರಿಮಿ, ಸಂವಿಧಾನ ವಿರೋಧಿ, ಅದರಲ್ಲೂ ಮಹಿಳಾ ವಿರೋಧಿ ಮಾತುಗಳನ್ನಾಡುತ್ತಿರುವ ರವಿಗೆ ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವಕಾಶ ಕೊಡುವುದಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಡ್ಯದ ಸಂವಿಧಾನ ಪರ ಮತ್ತು ಮಹಿಳಾ ಪರ ಮನಸ್ಸುಗಳು ಅವಕಾಶ ಕೊಡುವುದಿಲ್ಲ” ಎಂದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಿಐಟಿಯು ಟಿ.ಎಲ್. ಕೃಷ್ಣೇಗೌಡ, ಜನವಾದಿ ಸಂಘಟನೆಯ ದೇವಿ, ಕರ್ನಾಟಕ ಪ್ರಾಂತ ರೈತಸಂಘದ ಭರತ್ ರಾಜ್, ಮಹಿಳಾ ಮುನ್ನಡೆ  ಶಿಲ್ಪ, ಸೌಮ್ಯ, ಅಂಜಲಿ, ಕರ್ನಾಟಕ ಜನಶಕ್ತಿಯ ಕೃಷ್ಣಪ್ರಕಾಶ್, ಸಿದ್ದರಾಜು, ವಕೀಲರಾದ ಲಕ್ಷಣ್, ರಾಮಯ್ಯ, ದಸಂಸ ಕೃಷ್ಣ ಎಂ.ವಿ., ಸ್ವಾಭಿಮಾನಿ ಸಮ ಸಮಾಜದ ನರಸಿಂಹ ಮೂರ್ತಿ, ಸಮಾನ ಮನಸ್ಕರ ಸಂಘಟನೆಯ ಟಿಡಿ ನಾಗರಾಜ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ