Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಫೆ.8ರಂದು ಸ್ವಾಭಿಮಾನಿ ಗ್ರಾ.ಪಂ. ಸದಸ್ಯರಿಂದ ಬೆಂಗಳೂರು ಚಲೋ

ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳಿಗೆ ತಮ್ಮ ಜವಾಬ್ದಾರಿಗಳು ಸಮರ್ಥವಾಗಿ ನಿರ್ವಹಿಸಲು ಬೇಕಾಗುವ ಜವಾಬ್ದಾರಿ ನಕ್ಷೆ ರಚನೆ ಮಾಡಬೇಕು, ಪ್ರಜಾಪ್ರಭುತ್ವದ ಮೂಲಘಟಕಗಳಾದ ಪ್ರಜೆಗಳಿಗೆ ಅಧಿಕಾರ ನೀಡಲು ಗ್ರಾಮಸಭಾಗಳಿಗೆ ನಿಯಮಗಳ ರಚನೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.8ರಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಮಂಡ್ಯ ತಾಲ್ಲೂಕು ಅಧ್ಯಕ್ಷ ನಾಗೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳ ಸೇವೆಯನ್ನು ಜನರ ಬಳಿಗೆ ಕೊಂಡೊಯ್ಯುವ ದೃಷ್ಟಿಯಿಂದ ಬಾಪುಜಿ ಸೇವಾ ಕೇಂದ್ರಗಳ ಬಲವರ್ಧನೆಗೆ ಮುಂಚೂಣಿ ಕಾರ್ಯಾಲಯಗಳ ಸ್ಥಾಪನೆ ಸ್ಥಾಪನೆ ಮಾಡಬೇಕು, 29 ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಪಂಚಾಯತ್ ರಾಜ್ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಸುವಂತಾಗಲು ಅಧಿಕಾರ ವಿಕೇಂದ್ರೀಕರಣ ಕಾಯ್ದೆ ರಚನೆ ಮಾಡಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಯ ಆಡಳಿತ ವ್ಯವಸ್ಥಿತವಾಗಿ ನಡೆಯಲು ಕಚೇರಿ ನಿರ್ವಹಣ ಕೈಪಿಡಿ ರಚನೆ ಮಾಡಬೇಕು, ಇ-ಸ್ವತ್ತು ಆಂದೋಲನದ ಮೂಲಕ ಗ್ರಾಮ ಪಂಚಾಯಿತಿಯ ತೆರಿಗೆಗೆ ಒಳಪಟ್ಟಿರುವ ಎಲ್ಲಾ ಆಸ್ತಿಗಳಿಗೆ ಈ ಸ್ವತ್ತು ದಾಖಲೆ ಸೃಜನೆ ಮಾಡಿ ಹಂಚಬೇಕು, ಪಂಚಾಯಿತಿ ಸದಸ್ಯರನ್ನು ರಾಜ್ಯ ಶಿಷ್ಟಾಚಾರಕ್ಕೆ ಒಳಪಡಿಸಬೇಕು, ಗ್ರಾ.ಪಂ.ಅಧ್ಯಕ್ಷರಿಗೆ ಕನಿಷ್ಟ 15 ಸಾವಿರ ರೂ. ಹಾಗೂ ಉಪಾಧ್ಯಕ್ಷರಿಗೆ ಕನಿಷ್ಟ 12 ಸಾವಿರ ರೂ.ಗಳ ಗೌರವಧನವನ್ನು ಕೇರಳ ಮಾದರಿಯಲ್ಲಿ ನೀಡಬೇಕೆಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿರುವ ತೊಡಕುಗಳ ನಿವಾರಣೆ ಮಾಡಿ, ಒಟ್ಟು 28 ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಈ ಹೋರಾಟದಲ್ಲಿ ರಾಜ್ಯಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸುವರ್ಣಾವತಿ, ಪ್ರದೀಪ್ ಸಿದ್ದೇಗೌಡ, ಕೆಂಪೇಗೌಡ, ಅರ್ಪಿತಾ, ಹನುಮಂತು ಹಾಗೂ ಸುಜಾತ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ