Sunday, November 22, 2026

ಪ್ರಾಯೋಗಿಕ ಆವೃತ್ತಿ

ಗ್ರಾ.ಪಂ. ವಿದ್ಯುತ್ ಬಿಲ್ ಸರಿಯಾದ ಸಮಯಕ್ಕೆ‌ ಪಾವತಿಸಿ : ಡಾ. ನಾರಾಯಣಸ್ವಾಮಿ

ರಾಜ್ಯದಾದ್ಯಂತ ಗ್ರಾಮ ಪಂಚಾಯತಿಯಲ್ಲಿ ನಿರ್ವಹಿಸಲಾಗುತ್ತಿರುವ ಬೀದಿ ದೀಪ, ಕುಡಿಯುವ ನೀರಿನ ಬೋರ್ ವೆಲ್ ಗಳಿಗೆ ಬಳಕೆ ಮಾಡುವ ವಿದ್ಯುತ್ ಬಿಲ್ಲನ್ನು ನಿಗದಿತವಾಗಿ ಪಾವತಿ ಮಾಡಿ ಎಂದು ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಡನೆ ಸಮಾಲೋಚನ ಸಭೆ ನಡೆಸಿ ಮಾತನಾಡಿದರು. ವಿದ್ಯುತ್ ಬಿಲ್ಲನ್ನು ಸರ್ಕಾರ ರಿಕನ್ಸ್ಲೇಷನ್ ಮಾಡಿಸುತ್ತದೆ ಎಂಬ ಧೋರಣೆಯನ್ನು ಬಿಡಬೇಕು ಎಂದರು.

ಮಾಚ್೯ 2023 ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್ ಬಿಲ್ (ರಿಕನ್ಸ್ ಲೀಷನ್)
reconciliation ಮಾಡಿಸಿದ್ದು, ಈ ಕುರಿತಂತೆ ಚೆಸ್ಕಾಂ ಅವರು ನೀಡುತ್ತಿರುವ ಬಾಕಿ ವಿದ್ಯುತ್ ಬಿಲ್ಲಿನ ವಿವರವನ್ನು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳಷ್ಟು ನಿರುಪಯುಕ್ತ ಬೋರ್ ವೆಲ್ ಗಳಿರುತ್ತದೆ. ಅವುಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ. ಕೆಲವು ಬಾರಿ ಹಳೆಯ ವಿದ್ಯುತ್ ಬಿಲ್ ನ ಮೊತ್ತ ಸೇರಿಕೊಂಡು ಬಿಲ್ ಬರುತ್ತಿರುತ್ತದೆ. ಪರಿಶೀಲಿಸಿ ಹಣ ಪಾವತಿ ಮಾಡಿ ಎಂದು ಕಿವಿ ಮಾತು ಹೇಳಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು‌ ಪಂಚಾಯತ್ ನಿಂದ ಯೋಜನೆ ರೂಪಿಸಲು ಬೇರೆ ನಿಯಮಗಳಿದ್ದರೆ ಉತ್ತಮ. ಎರಡು ಒಂದೇ ರೀತಿಯಾದರೆ ಡುಪ್ಲಿಕೇಷನ್ ಆಗುವ ಸಾಧ್ಯತೆ ಇರುತ್ತದೆ. ಕುಡಿಯುವ ನೀರಿನ ಘಟಕ, ರಸ್ತೆ, ಸೇರಿದಂತೆ ವಿವಿಧ ಆಸ್ತಿಗಳ ನಿರ್ವಹಣೆಗೆ ಅವಕಾಶ ನೀಡಬೇಕು ಎಂದರು.

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುದಾನ ಬಳಕೆ ಮಾಡುವ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಜನಾಂಗದವರ ಜನಸಂಖ್ಯೆ ಕಡಿಮೆ ಇರುತ್ತದೆ. ಕೆಲವು ಕಡೆ ಹೆಚ್ಚಿರುತ್ತದೆ. ಹೆಚ್ಚು ಜನಸಂಖ್ಯೆ ಇರುವ ಕಡೆ ಕಡಿಮೆ ಜನಸಂಖ್ಯೆ ಇರುವ ಕಡೆ ಬಳಕೆಯಾಗದೆ ಉಳಿಕೆಯಾಗುವ ಅನುದಾನ ಬಳಕೆಗೆ ಸಡಲಿಕೆ‌ ಮಾಡಿಕೊಡಬೇಕು ಎಂದರು‌.

ರಸ್ತೆ ಅಭಿವೃದ್ಧಿಗೆ ಕೇವಲ ಶೇ 10 ಅನುದಾನ ಬಳಕೆಗೆ ಅವಕಾಶವಿದೆ. ಆದರೆ ಇದು‌ ಸಕಾಗುತ್ತಿಲ್ಲ ಹೆಚ್ಚಿನ ಹಣ ಬಳಕೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು.

ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕಾಸು ಆಯೋಗ ಕಳುಹಿಸಿರುವ ಪ್ರಶ್ನಾವಳಿ ಕುರಿತ ಮಾಹಿತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಪಂಚಾಯಿತಿ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಾಚರಣೆ, ಹುದ್ದೆಗಳು, ಆಯವ್ಯಯ, ವೆಚ್ಚಗಳ ವಿವರ ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗದ ಅನುದಾನ, ಹಂಚಿಕೆ, ಬಿಡುಗಡೆ, ಮಾಡಲಾದ ವೆಚ್ಚ ಕುರಿತ ವಿವರವನ್ನು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಧನುಷ್ ಅವರು ವಿವರಿಸಿದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ , ನೀರು ಸರಬರಾಜು, ಒಳಚರಂಡಿ, ಬೀದಿ ದೀಪಗಳು, ಘನತ್ಯಾಜ್ಯ ನಿರ್ವಹಣೆ, ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ವಿವರವನ್ನು‌ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ ಸಭೆಗೆ ವಿವರಿಸಿದರು.

ಸಭೆಯಲ್ಲಿ ಮಂಡ್ಯ ನಗರಸಭೆ ಅಧ್ಯಕ್ಷ ನಾಗೇಶ್, 5ನೇ ಹಣಕಾಸು ಆಯೋಗದ ಸದಸ್ಯರಾದ ಆರ್‌‌.ಎಸ್.ಪೋಂಡೆ, ಮಹಮ್ಮದ್ ಸನಾಉಲ್ಲಾ, ಕಾರ್ಯದರ್ಶಿ ಆರ್. ಸ್ನೇಹಲ್, ಸಮಾಲೋಚಕ ಕೆಂಪೇಗೌಡ, ಸಿ.ಜಿ ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ