ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಬಡಜನರಿಗೆ ನಿವೇಶನವನ್ನು ನೀಡಬೇಕು, ಗ್ರಾಮ ಠಾಣಾ ಜಾಗವನ್ನು ಆಕ್ರಮಿಸಿಕೊಂಡಿರುವ ಭೂಗಳ್ಳರ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನಿವೇಶನ ರಹಿತರು ಸೋಮವಾರ ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಲ್ಲೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಜನರಿಗೆ ಮೊಳೆ ಗ್ರಾಮದ ಗ್ರಾಮಠಾಣಾ ಆಸ್ತಿಯಲ್ಲಿ ನಿವೇಶನವಿಲ್ಲದ ಬಡಜನರಿಗೆ ನಿವೇಶನ ನೀಡಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಂಡ್ಯ ತಹಶೀಲ್ದಾರ್ ಮತ್ತು ತಾಲ್ಲೂಕು ಭೂ ಮಾಪಕರು ಮತ್ತು ಕೆರಗೋಡು ಪೊಲೀಸ್ ಠಾಣಾಧಿಕಾರಿಗಳ ಸೂಕ್ತ ಬಂದೋಬಸ್‌ನೊಂದಿಗೆ ಪಿ.ಡಿ.ಓ ರವರ ಸಮ್ಮುಖದಲ್ಲಿ ಮೊಳೆ ಗ್ರಾಮಠಾಣಾ ಪ್ರದೇಶದಲ್ಲಿರುವ ಸರ್ವೆ ನಂ.ಗಳು, ಹಿಸ್ಸಾ ನಂಬರ್‌ಗಳ ಹದ್ದುಬಸ್ತುಗಳ ಅಳತೆ ಮಾಡಿ ಗಡಿ ಗುರುತುಗಳನ್ನು ತೋರಿಸಿ ಸರ್ವ ನಕಾಶೆಯನ್ನು ಮಾಡಿಕೊಡಲಾಗಿತ್ತು.
ಆದರೆ ಪಟ್ಟಭದ್ರ ಹಿತಾಸಕ್ತಿಗಳು ಈ ಗ್ರಾಮ ಠಾಣಾದ ಗಡಿ ಗುರುತು ಕಲ್ಲುಗಳನ್ನು ಕಿತ್ತುಹಾಕಿ ಅಕ್ರಮವಾಗಿ ಗ್ರಾಮಠಾಣಾ ಜಾಗದಲ್ಲಿ ಉಳುಮೆ ಮಾಡುತ್ತಿದ್ದು, ಈ ಗ್ರಾಮ ಠಾಣಾ ಜಾಗವನ್ನು ರಕ್ಷಣೆ ಮಾಡಬೇಕಾದ ಪಿ.ಡಿ.ಓ, ರವರು ಪಟ್ಟಾಭದ್ರ ಹಿತಾಸಕ್ತಿಗಳ ಅಮಿಷಕ್ಕೆ ಒಳಗಾಗಿ ಭೂಗಳ್ಳರ ಪರವಾಗಿ ನಿಂತಿದ್ದಾರೆಂದು ಪ್ರತಿಭಟನಕಾರರು ದೂರಿದರು.
ಈ ಗ್ರಾಮಠಾಣಾ ಪ್ರದೇಶದಲ್ಲಿ ನಿವೇಶನ ರಹಿತ ಬಡಜನರಿಗೆ ನಿವೇಶನ ನೀಡಬೇಕು. ಗ್ರಾಮಠಾಣಾ ಜಾಗವನ್ನು ರಕ್ಷಣೆ ಮಾಡಲು ವಿಫಲವಾಗಿರುವ ಪಿ.ಡಿ.ಓ. ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದರು.
2022ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭಕ್ಕೆ ದೇಶದ ಎಲ್ಲಾ ವಸತಿ ರಹಿತರಿಗೂ ಪಕ್ಕ ಛಾವಣಿ, ಮನೆಯಲ್ಲಿ ನಲ್ಲಿ, ನಲ್ಲಿಯಲ್ಲಿ ನೀರು, ಗ್ಯಾಸ್ ಸಂಪರ್ಕ, ವಿದ್ಯುತ್, ಎಲ್.ಇ.ಡಿ. ಬಲ್ಸ್, ಶೌಚಾಲಯವನ್ನು ಒಳಗೊಂಡಂತಹ ಸುಸಜ್ಜಿತವಾದ ಮನೆಗಳನ್ನು ನೀಡುವುದು ನನ್ನ ಕನಸು ಎಂದು ಮಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ 2019 ರಲ್ಲಿ ಸಾರ್ವಜನಿಕ ಸಭೆಯಲ್ಲಿ ಶಪಥ ಮಾಡಿದ್ದರು. ಆದರೆ 2023 ಬಂದರೂ ಅವರ ಭರವಸೆಗಳು ಈಡೇರಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಎಂ.ವಿ.ಕೃಷ್ಣ, ಮಂಜುನಾಥ್, ಮಂಜೇಶ್, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.




