ಜೀವ ವಿರೋಧಿಯಾಗಿದ್ದ ಮನುಸ್ಮೃತಿ ವಿರುದ್ದ ಜಾರಿಯಲ್ಲಿದ್ದ ಕಾಲಘಟ್ಟದಲ್ಲಿ, ಅದರ ವಿರುದ್ಧ ಹೋರಾಡಿ ಮಹಿಳೆಯರಿಗೆ ಶಿಕ್ಷಣ ನೀಡಿದ ದಿಟ್ಟ ಹೋರಾಟಗಾರ್ತಿ ಸಾವಿತ್ರಿಬಾಯಿಫುಲೆ ಅವರು ಎಂದು ಗಾಮನಹಳ್ಳಿ ಜ್ಙಾನಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹದೇವಸ್ವಾಮಿ ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಮಂಡ್ಯ ಜಿಲ್ಲಾಘಟಕವು ಮಂಡ್ಯ ತಾಲ್ಲೂಕಿನ ಗಾಮನಹಳ್ಳಿ ಜ್ಙಾನಭಾರತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿಫುಲೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಅವರು ಹುಟ್ಟಿದ್ದು ಬ್ರಾಹ್ಮಣ ಜಾತಿಯಾದರೂ ಸ್ವಜಾತಿಯ ಸಂಪ್ರದಾಯಗಳನ್ನು ಮೆಟ್ಟಿ ಶೋಷಿತ ಜನರಿಗೆ ಅಕ್ಷರ ಜ್ಙಾನ ನೀಡಲು ಶಾಲೆಗಳನ್ನು ತೆರೆದರು. ಮೇಲ್ವರ್ಗವವರು ಎಷ್ಟೇ ಅಪಮಾನ ಮಾಡಿದರೂ ಎದೆಗುಂದದೇ, ಅಕ್ಷರ ಕಲಿಸಿದ ಮಹಾಮಾತೆ ನಮಗೆ ವಿದ್ಯಾ ದೇವತೆಯಾಗಬೇಕು ಎಂದರು.
ಶಿಕ್ಷಕ ಜನಾರ್ಧನ್ ಮಾತನಾಡಿ, ಸಾವಿತ್ರಿಬಾಯಿ ನಮಗೆ ಮತ್ತು ಹೆಣ್ಣು ಮಕ್ಕಳಿಗೆ ಆದರ್ಶಪ್ರಾಯರಾಗಬೇಕು. ಮೇಲ್ವರ್ಗದವರು ಇವರ ವಿದ್ಯಾಸೇವೆ ಸಹಿಸದೇ ಕೆಸರು, ಸೆಗಣಿ, ಟೊಮ್ಯಾಟೋದಲ್ಲಿ ಹೊಡೆದು ಅಪಮಾನ ಮಾಡಿದರೂ,ಛಲ ಬಿಡದ ತಾಯಿ ಸಾವಿತ್ರಿ ಬಾಯಿ ಫುಲೆ ಅವರು ಅಕ್ಷರ ಕಲಿಸುವುದನ್ನು ಮುಂದುವರಿಸಿದರು ಎಂದು ಸ್ಮರಿಸಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಡಿ.ದೇವರಾಜ್ ಕೊಪ್ಪ ಮಾತನಾಡಿ, ಸಾವಿತ್ರಿಬಾಯಿ ಅವರು ಸತಿಸಹಗಮನ ಪದ್ಧತಿಯ ವಿರುದ್ದವೂ ಹೋರಾಟ ಮಾಡುತ್ತಾರೆ, ಇದನ್ನು ಮೆಚ್ಚಿದ ಬ್ರಿಟಿಷರು ಕೂಡ ಫುಲೆ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಎಂದರು.
ವೇದಿಕೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಮಹಿಳಾ ಸಂಚಾಲಕಿ ಜಯಸುಧಾ, ಶಿಕ್ಷಕರಾದ ರಾಜೇಶ್, ಕಾಳಯ್ಯ, ಸುಮ, ಮಂಜುಳ ಉಪಸ್ಥಿತರಿದ್ದರು.




