ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 5 ಗ್ರಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿ, ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರದೆ, ಜನತೆಗೆ ಮೋಸವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭನೆ ನಡೆಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು ಮತ್ತು ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಕಾಂಗ್ರೆಸ್ ಪಕ್ಷವು ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತರುವಲ್ಲಿ ವಿಫಲವಾಗಿದೆ. ಗೃಹಲಕ್ಷ್ಮಿ ಹಣವನ್ನು ಯಾವಾಗ ಬೇಕೋ ಆಗ ಬ್ಯಾಂಕಿನ ಅಕೌಂಟುಗಳಿಗೆ ಕೇವಲ ಬೆರಳಣಿಕೆಯಷ್ಟು ಫಲಾನುಭವಿಗಳಿಗೆ ಹಾಕಲಾಗುತ್ತಿದೆ. ಆಗಿದ್ದರೆ ಉಳಿದ ಬಡವರ ಪಾಡೇನು ? ಎಂದು ಪ್ರಶ್ನಿಸಿದರು.
ದಿನಾಂಕ ನಿಗದಿಗೊಳಿಸಿ
ಗ್ಯಾರಂಟಿ ಯೋಜನೆಯ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕು. ಚುನಾವಣೆ ಬಂದಾಗ ₹2 ಸಾವಿರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದು, ಉಳಿದಂತೆ ಅದನ್ನು ಮುಂದೂಡಿಕೆ ಮಾಡುವುದು ಸರಿಯಲ್ಲ. ಪ್ರತಿ ತಿಂಗಳು ದಿನಾಂಕ 1 ರಿಂದ 5 ರೊಳಗೆ ಹಣ ಬಿಡುಗಡೆ ಮಾಡಬೇಕು. ಉಚಿತ ಬಸ್ ಬಿಟ್ಟಿರುವುದರಿಂದ ಮಹಿಳೆಯರು ಗುದ್ದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಬಸ್ಸುಗಳಿಲ್ಲದೆ, ಕಷ್ಟಪಡುತ್ತಿದ್ದಾರೆ ಎಂದು ದೂರಿದರು.
ಗ್ಯಾರಂಟಿ ಯೋಜನೆ ನೀಡದೇ ಹೋದರೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜನಪ್ರತಿನಿಧಿಗಳನ್ನು ಅಡ್ಡಹಾಕಿ, ಅವರ ಮನೆ ಮುಂದೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಮುಖಂಡರಾದ ಮಂಜುಳಾ ಉದಯ ಶಂಕರ್, ಪದ್ಮಾವತಿ, ನೀನಾ ಪಟೇಲ್, ಬೇಲೂರು ಶಶಿಧರ್, ವಕೀಲ ಬಸವರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




