ಎರಡು ವರ್ಷದಿಂದ ನಿನಗೆ ಟಿಕೆಟ್ ಎಂದು ಹೇಳುತ್ತಲೇ ಬಂದ ಡಿ.ಕೆ. ಶಿವಕುಮಾರ್ ಅವರು ಕೊನೆಗೆ ಹಣದ ಬಲವಿರುವ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ. ಹಣ ಕೊಟ್ರೆ ಟೆರರಿಸ್ಟ್ ಗೆ ಬೇಕಾದರೂ ಕರೆದು ಟಿಕೆಟ್ ಕೊಡ್ತಾರೆ ಎಂದು ಗುರುಚರಣ್ ಗುಡುಗಿದರು.
ಮದ್ದೂರಿನಲ್ಲಿಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷಗಳ ಹಿಂದಿನಿಂದಲೂ ನಿನಗೆ ಟಿಕೆಟ್ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿಕೊಂಡೇ ಬಂದರು. ಅವರು ಹೇಳಿದಂತೆ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದೆ. ಪ್ರಜಾಧ್ವನಿ ಸಮಾವೇಶವನ್ನು ಯಶಸ್ವಿಯಾಗಿ ಮಾಡಿದೆ. ಆದರೆ ಪಕ್ಷದ ಪರ ಕೆಲಸ ಮಾಡಿದ ನನಗೆ ಟಿಕೆಟ್ ನೀಡುವುದನ್ನು ಬಿಟ್ಟು, ಪಕ್ಷದ ಕೆಲಸ ಮಾಡದ ಕೆಲ ದಿನಗಳ ಹಿಂದೆ ಪಕ್ಷ ಸೇರಿದ ಹಣವಂತ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಅವರ ಬಳಿ ಇರುವ ಹಣ ಬಲ ನೋಡಿ ಟಿಕೆಟ್ ನೀಡಿದರೆ ನನ್ನ ಕಥೆ ಏನಾಗಬೇಕು. ನನ್ನನ್ನು ನಂಬಿರುವ ಬೆಂಬಲಿಗರು, ಕಾರ್ಯಕರ್ತರ ಕಥೆ ಏನಾಗಬೇಕು. ಹಣ ಕೊಟ್ಟರೆ ಟೆರರಿಸ್ಟ್ ಗೆ ಬೇಕಾದರೂ ಕರೆದು ಟಿಕೆಟ್ ಕೊಡುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದಿರುವ ವ್ಯಕ್ತಿಯೇನೂ ಜಯಚಾಮರಾಜ ಒಡೆಯರ್ ಅವರ ವಂಶಸ್ಥರಾ ? ಇಲ್ಲಾ ಹೆಚ್.ಕೆ.ವೀರಣ್ಣಗೌಡ ಮಂಚೇಗೌಡ ಅವರ ಕುಟುಂಬದವರಾ ? ಹೋಗಲಿ, ಅವರ ಕುಟುಂಬದವರು ಯಾರಾದರೂ ಶಾಸಕರಾಗಿ, ಮಂತ್ರಿಯಾಗಿ ಮದ್ದೂರು ಕ್ಷೇತ್ರದ ಜನರ ಸೇವೆ ಮಾಡಿದ್ದಾರಾ ? ಎರಡು ವರ್ಷಗಳ ಹಿಂದೆ ಸಮಾಜ ಸೇವೆ ಹೆಸರಿನಲ್ಲಿ ಮದ್ದೂರಿನಲ್ಲಿ ಬಂದ ವ್ಯಕ್ತಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ತಂದಿದೆ. ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಹೇಳಬಹುದಿತ್ತು ಎಂದರು.
ನಾನು ಚುನಾವಣೆಗಾಗಿ ಅವರು ಹೇಳಿದಂತೆ ಎಲ್ಲಾ ಸಂಪನ್ಮೂಲಗಳನ್ನು ಸಿದ್ಧ ಮಾಡಿಕೊಂಡಿದ್ದೆ. ಆದರೆ ಹಣವಿರುವ ವ್ಯಕ್ತಿಗೆ ಟಿಕೆಟ್ ನೀಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟರು. ಇಂತವರಿಂದ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.




