Thursday, June 13, 2024

ಪ್ರಾಯೋಗಿಕ ಆವೃತ್ತಿ

ಭಾರತ ದೇಶ- ಸಂವಿಧಾನ ದೊಡ್ಡ ಅಪಾಯಕ್ಕೆ ಸಿಲುಕಿವೆ: ಗುರುಪ್ರಸಾದ್ ಕೆರಗೋಡು

ದೇಶದಲ್ಲಿ ಸಂವಿಧಾನ ಬದ್ದವಾದ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ, ಇಡೀ ಭಾರತ ದೇಶದಲ್ಲಿರುವ ಜನ ಆತಂಕ ಮತ್ತು ತಲ್ಲಣದಿಂದ ಬದುಕುತ್ತಿದ್ದಾರೆ, ಅಲ್ಪಸಂಖ್ಯಾತವಾಗಿರುವ ಮುಸ್ಲಿಂ ಸಮುದಾಯ ಬಹಳ ಆಭದ್ರತೆ, ಭಯ, ಆತಂಕದಿಂದ ತಳಮಳಗೊಳ್ಳುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತ ದೇಶ ಮತ್ತು ಭಾರತ  ಸಂವಿಧಾನ ಬಹಳ ದೊಡ್ಡ ಅಪಾಯಕ್ಕೆ ಸಿಲುಕಿದೆ ಎಂದು ದಲಿತ ಸಂಘ‍ರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಕಳವಳ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸಿಪಿಐಎಂ ವತಿಯಿಂದ ನಡೆದ ‘ಶ್ರಮಜೀವಿಗಳ ಸಮಾವೇಶದ’ಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮುಸ್ಲಿ ಸಮುದಾಯವನ್ನು ಸಮಾಜದಿಂದ ದೂರವಿಡುವಂತಹ, ಅವರು ನಮ್ಮವರಲ್ಲ ಎನ್ನುವ ರೀತಿಯಲ್ಲಿ ಸಮದಾಯಗಳನ್ನು ಗುರಿ ಮಾಡಲಾಗುತ್ತಿದೆ. ಇನ್ನೊಂದು ಕಡೆ ದಲಿತ ಸಮುದಾಯಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಕಳೆದ 10 ವರ್ಷಗಳ ಮೋದಿ ಸರ್ಕಾರದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಕಗ್ಗೊಲೆಗಳು ದುಪ್ಪಟ್ಟಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವವಿರುವ ದೇಶದಲ್ಲಿ ಈ ರೀತಿಯಲ್ಲಿ ಅಭದ್ರತೆಯನ್ನು ಉಂಟು ಮಾಡುತ್ತಿರುವುದು ಒಂದು ಕಡೆಯಾದರೆ, ಕೂಲಿಕಾರರು, ದಲಿತರು, ಕಾರ್ಮಿಕರು, ಭಯದ ವಾತಾವರಣದಲ್ಲಿ ಜೀವನ  ಮಾಡಲು, ಮೂಲಭೂತ ಅಗತ್ಯಗಳಾದ ಆಹಾರವನ್ನು ತೆಗೆದುಕೊಳ್ಳಲು ಹಣಕಾಸಿನ ತೊಂದರೆಯಾಗುತ್ತಿರುವ ಸಂದರ್ಭದಲ್ಲಿ ನರೇಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡದೇ ಇರುವುದು ಮತ್ತು ಕೆಲಸ ಮಾಡಿದ ಮಹಿಳೆಯರಿಗೆ ಗೌರವ ಧನವನ್ನು ನೀಡದೇ ಇರುವ ಸರ್ಕಾರ ನಮ್ಮ ನಡುವೆ ಇದೆ. ಇಂತಹ ಪರಿಸ್ಥಿತಿಗೆ ಕಾರಣವಾಗಿರುವ ಆರ್ ಎಸ್ ಎಸ್ ಮತ್ತು ಸಂಘಪರಿವಾರ ಕಾರಣವಾಗಿದೆ ಎಂದರು.

ಕೆರಗೋಡು ಘಟನೆ ಸಂಘ ಪರಿವಾರ ಆರ್.ಎಸ್.ಎಸ್ ಕಾರಣ

ಮಂಡ್ಯ ತಾಲ್ಲೂಕಿನ ಕೆರಗೋಡಿನಲ್ಲಿ ಇದುವರೆವಿಗೂ ಯಾವುದೇ, ಗಲಭೆಗಳು, ಒಡೆದಾಟ ನಡೆದ ಉದಾಹರಣೆಗಳಿಲ್ಲ. ಎಲ್ಲಾ ಸಮುದಾಯಗಳ ಜನ ಅಣ್ಣ ತಮ್ಮಂದಿರ ರೀತಿ ಸಾಮರಸ್ಯ ಜೀವನ ಮಾಡಿಕೊಂಡು ಬರುತ್ತಿದ್ದರು. ಸಂಘ ಪರಿವಾರ ಕೆರಗೋಡಿವಿನಲ್ಲಿ ಹನುಮ ಧ್ವಜದ ಹೆಸರಿನಲ್ಲಿ ಕಿಚ್ಚನ್ನು ಹಚ್ಚಿತು, ಆರ್ ಎಸ್ ಎಸ್ ನ ಚಟುವಟಿಕೆಯಲ್ಲಿ ಭಾಗಿಯಾಗಿದ್ದಂತಹ  ಕೆಲವೊಂದಿಷ್ಟು ಜನರು ಮಾತ್ರ ಈ ಕೃತ್ಯವನ್ನೆಸಗಿ, ಇಡೀ ಗ್ರಾಮದ ಸುತ್ತಮುತ್ತವಿರುವ ಎಲ್ಲಾ ಹಳ್ಳಿಯ ಜನರಿಗೆ ಒಂದಷ್ಟು ಆತಂಕವನ್ನು ಸೃಷ್ಟಿಮಾಡಿರುವುದನ್ನು ನಾವು ಗಮನಿಸಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಯಾವುದೇ ಮೂಲೆಗಳಿಗೆ ಹೋಗಲಿ, ದೇವಸ್ಥಾನಕ್ಕೆ ಹೋಗಲಿ ಹಬ್ಬಗಳು ಬಂದಾಗ, ಈ ಹಿಂದೆ ಎಲ್ಲರೂ, ಅದನ್ನು ತಳಿರು ತೋರಣಗಳಿಂದ, ಹಸಿರು ಸೊಪ್ಪುಗಳಿಂದ ಅಲಂಕಾರ ಮಾಡಿ ಹಬ್ಬಗಳನ್ನು ಮಾಡುತ್ತಿದ್ದೆವು.  ಆದರೆ ಈಗ ಕಣ್ಣಿಗೆ ರಾಚುವಂತಹ ಕೇಸರಿ ಬಣ್ಣದ ಬಾವುಟಗಳನ್ನು ಹಾರಿಸುವುದರ ಮೂಲಕ ಒಂದು ರೀತಿಯ ಭಯದ ವಾತಾವರಣವನ್ನು ಈ ಆರ್ ಎಸ್ ಎಸ್ ಸಂಘ ಪರಿವಾರದ ಜನ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮುಗ್ದ ಹಳ್ಳಿಗಾಡಿನ ಗ್ರಾಮೀಣದ ಭಾಗದಲ್ಲಿ ಇರುವ ಜನರಲ್ಲಿರುವ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಯಾವುದೇ ಘಟನೆ ಸಂಭವಿಸಿದರೆ ಅದಕ್ಕೆ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವುದು, ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡುವುದು, ಕ್ರಿಶ್ಚಿಯನ್ ಮತ್ತು ದಲಿತ ಸಮಯದಾಯವನ್ನು ಹೊಣೆ ಮಾಡುವುದು, ಜಾತಿ-ಜಾತಿ ಜನರನ್ನು ಎತ್ತಿಕಟ್ಟಿ, ಜನರನ್ನು ವಿಭಾಗಿಸಿ, ತಮ್ಮ ಅಧಿಕಾರಕ್ಕಾಗಿ ಓಟಿನ ಆಸೆಗಾಗಿ ತಮ್ಮ ಜನರ ನಡುವೆ ಇರುವ ಸಾಮರಸ್ಯಕ್ಕೆ ಇಂದು ಬೆಂಕಿ ಇಡುತ್ತಿದ್ದಾರೆ. ಆ ಸಾಮರಸ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ದುಡಿಯುವ ವರ್ಗಗಳ ಸಮಾವೇಶವನ್ನು ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.

ದುಡಿಮೆ ಸಂಸ್ಕೃತಿಯ ಉಳಿವಿಗಾಗಿ, ಎಲ್ಲಾ ಸಮುದಾಯಗಳು ಎಲ್ಲರು ಪ್ರೀತಿ ವಿಶ್ವಾಸದಿಂದ ಬದುಕುತ್ತಿರುವ ವಾತಾವರಣವನ್ನು ಸಂಘ ಪರಿವಾರದವರು ಕಲುಷಿತಗೊಳಿಸಿ, ಅದನ್ನು ಕದಡಿ, ಜನರಿಗೆ ಧರ್ಮದ ಅಫೀಮನ್ನು ದೇವರ ಅಮಲನ್ನು ನಮಗೆ  ಉಣಬಡಿಸಲು ಹೊರಟಿದ್ದಾರೆ. ಅದ್ದರಿಂದ ಇಲ್ಲಿ ನೆರದಿರುವ ತಾಯಂದಿರು ತಮ್ಮ ಮಕ್ಕಳಿಗೆ  ಕೇಸರಿ ಟವಲ್ ಹಾಕಿಕೊಂಡು ಓಡಾಡುತ್ತಿರುವವರ ಸಹವಾಸ ಮಾಡಬೇಡಿರೆಂದು ಕಿವಿಮಾತು ಹೇಳಬೇಕೆಂದು ಮನವಿ ಮಾಡಿದರು.

ಬಡವರ ಮಕ್ಕಳೇ ಬಲಿಪಶುಗಳು

ಬಡವರ ಮಕ್ಕಳು, ಕೂಲಿಕಾರರ ಮಕ್ಕಳು, ಹಿಂದುಳಿದ ವರ್ಗದ ಜನರೇ ಆರ್.ಎಸ್.ಎಸ್ ಸಂಘ ಪರಿವಾರ  ಹುಟ್ಟು ಹಾಕುವ ಗಲಾಟೆ, ಹೊಡೆದಾಟ, ಬಡಿದಾಟಗಳಂತಹ ಘಟನೆಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿರುವುದನ್ನು ನಾವು ನೋಡಬಹುದು. ಆದರೆ ಆರ್ ಎಸ್ ಎಸ್ ನ ಫಲವನ್ನು ಅನುಭವಿಸುತ್ತಿರುವಂತಹ, ಮತೀಯವಾದಿಗಳಾದ ಬ್ರಾಹ್ಮಣಶಾಹಿ ವರ್ಗಗಳು ಮಾತ್ರ ಉತ್ತಮ ಬದುಕನ್ನು ಮಾಡುತ್ತ, ಅವರ ಮಕ್ಕಳನ್ನು ವಿದೇಶಗಳಲ್ಲಿ ವ್ಯಾಸಂಗ ಮಾಡಿಸುತ್ತಾ, ಒಳ್ಳೆ ಉದ್ದೋಗಳನ್ನು ಮಾಡುತ್ತ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಆದರೆ ನಮ್ಮ ಮಕ್ಕಳನ್ನು ಮಾತ್ರ ಬೀದಿ ಜಗಳಗಳು, ಗಲಾಟೆಗಳಿಗೆ  ಹಚ್ಚುತ್ತಿದ್ದಾರೆ. ಆದ್ದರಿಂದ ಎಲ್ಲರು ತಮ್ಮ ತಮ್ಮ ಮಕ್ಕಳಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಬೇಕು ಎಂದು ಎಂದು ಕಿವಿಮಾತು ಹೇಳಿದರು.

ಮುಂಬರುವ 2024ರ ಚುನಾವಣೆಗೆ ನಾಗಲೋಟದಿಂದ ಓಡುತ್ತಿರುವ ಬಿಜೆಪಿ ಮೂರನೇ ಬಾರಿ ಬಂದರೆ ಸಂವಿಧಾನವೇ ಇರುವುದಿಲ್ಲ, ಹೊಸ ಶಿಕ್ಷಣ ನೀತಿಯ ಹೆಸರಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಕಿತ್ತುಕೊಳ್ಳಲಾಗುತ್ತಿದೆ. ಶಿಕ್ಷಣ ಪಡೆಯಲು ಅದರ ಶುಲ್ಕವು ಹೆಚ್ಚಾಗಿರುವುದನ್ನು ನಾವು ನೋಡಬಹುದಾಗಿದೆ. ಈ ಬಿಜೆಪಿ ಸರ್ಕಾರಕ್ಕೆ ಮೂಗುದಾರ ಹಾಕಲು ಕರ್ನಾಟಕ ಜನರಿಗೆ ಮಾತ್ರ ಸಾಧ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!