Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಗೆ ಕೈಗಾರಿಕೆ ತರಬೇಕು ಎನ್ನುವ ಉದ್ದೇಶ ನನಗಿದೆ : ಹೆಚ್.ಡಿ.ಕುಮಾರಸ್ವಾಮಿ

ಕಳೆದ ಚುನಾವಣೆಯಲ್ಲಿ ಪಕ್ಷಬೇಧ ಮರೆತು, ಜಾತಿ ಮರೆತು ನನ್ನನ್ನು ಆಯ್ಕೆ ಮಾಡಿದ್ದೀರಿ. ನರೇಂದ್ರ ಮೋದಿ ಅವರು ನನಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಗಳನ್ನು ನೀಡಿದ್ದಾರೆ. ನನ್ನಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಹೀಗಾಗಿ ಜಿಲ್ಲೆಗೆ ಒಂದು ಕೈಗಾರಿಕೆ ತರಬೇಕು ಎನ್ನುವ ಉದ್ದೇಶ ನನಗಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರದ ಅಗತ್ಯ ಇದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯನಗರದ ಮೈಷುಗರ್ ಪ್ರೌಢಶಾಲೆಯ ಮೈದಾನದಲ್ಲಿ ಶನಿವಾರ ನಡೆದ ಮೈಷುಗರ್ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಜನರ ಕನಸು ನನಸು ಮಾಡುವುದು ಎಲ್ಲರ ಹೊಣೆ. ರಾಜಕೀಯ ಬದಿಗಿಟ್ಟು ಎಲ್ಲರೂ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಮಂಡ್ಯ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಇಲ್ಲಿಗೆ ದೊಡ್ಡ ಕೈಗಾರಿಕೆ ತರುವ ಬಗ್ಗೆ ನಾನೇ ಸ್ವತಃ ರಾಜ್ಯ ಸರ್ಕಾರದ ಸಹಕಾರ ಕೋರುತ್ತೇನೆ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ೪೦೦ ಕೋಟಿ ಹಣವನ್ನು ಬಜೆಟ್‌ನಲ್ಲಿ ಇಟ್ಟು ತಕ್ಷಣವೇ ೧೦೦ ಕೋಟಿ ಹಂಚಿಕೆ ಮಾಡಿ, ಕಾರ್ಖಾನೆ ಪುನಶ್ಚೇತನಕ್ಕೆ ಇಟ್ಟೆ. ಅಷ್ಟರಲ್ಲಿ ನನ್ನ ಸರ್ಕಾರ ಹೋಯಿತು ಎಂದರು.

ಅಭಿವೃದ್ದಿಗೂ ರಾಜಕೀಯ

ರೈತ ಭವನ ಅಭಿವೃದ್ಧಿಗೆ ೪ ಕೋಟಿ ಅನುದಾನ ನೀಡಿದ್ದೇನೆ. ಆ ಹಣವನ್ನು ಯಾರು ಖರ್ಚು ಮಾಡಬೇಕು ಎಂಬ ಬಗ್ಗೆ ದೊಡ್ಡ ರಾಜಕೀಯ ನಡೆಯುತ್ತಿದೆ. ಅದು ಬೇಸರದ ಸಂಗತಿ. ಮಿಮ್ಸ್ ಅಭಿವೃದ್ಧಿಗೆ ಕೂಡ ಹಣ ನೀಡಿದ್ದು ಅಲ್ಲಿಯೂ ಕಾಮಗಾರಿಗಳು ಇನ್ನೇನು ಶುರುವಾಗಲಿವೆ. ಸಿಎಸ್‌ಆರ್ ಮೂಲಕ ೨.೫೦ ಕೋಟಿ ಹಣ ನೀಡಿದ್ದೇನೆ ಎಂದು ಹೇಳಿದರು.

ಬೆಂಗಳೂರಿಗೆ ೪,೫೦೦ ಎಲೆಕ್ಟ್ರಿಕ್ ಬಸ್

ಪ್ರಧಾನಮಂತ್ರಿಗಳ ಪಿಎಂ ಇ ಡ್ರೈವ್ ಯೋಜನೆ ಮೂಲಕ ಬೆಂಗಳೂರು ನಗರಕ್ಕೆ ೪,೫೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಬಸ್‌ಗಳನ್ನು ಕೊಡಲಾಗುವುದು. ದೇಶದ ಐದು ನಗರಗಳಿಗೆ ಒಟ್ಟು ೧೪,೦೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದ್ದೇವೆ. ಆ ಪೈಕಿ ೪,೫೦೦ ಬಸ್ ಗಳನ್ನು ಬೆಂಗಳೂರು ನಗರಕ್ಕೆ ನೀಡಲಾಗಿದೆ. ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕಾರಣಕ್ಕೆ ೨೦ ರಿಂದ ೨೫ ಎಲೆಕ್ಟಿçಕ್ ಬಸ್‌ಗಳನ್ನು ಬಿಡುವ ಅಗತ್ಯವಿದೆ, ಅದಕ್ಕೂ ಕೂಡ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.

ನಾಲ್ವಡಿ, ಸರ್ ಎಂ.ವಿ. ಹೆಸರು ಉಳಿಸುವ ಕೆಲಸ

ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಈಗಾಗಲೇ ಪ್ರಯತ್ನ ಮಾಡುತ್ತಿದ್ದೇವೆ. ೧೫ ರಿಂದ ೧೮ ಸಾವಿರ ಕೋಟಿ ರೂ. ವೆಚ್ಚ ಮಾಡಿ ಕಾರ್ಖಾನೆಯನ್ನು ಪುನಾರಂಭಿಸಲಿದ್ದೇವೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನೂ ನಾವು ಉಳಿಸುತ್ತೇವೆ. ಹಾಗೆಯೇ ಎಚ್‌ಎಂಟಿ ಉಳಿಸುವ ಪ್ರಯತ್ನಕ್ಕೂ ಕೈ ಹಾಕಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ನಾನಾ ರೀತಿಯಲ್ಲಿ ಅಡ್ಡಿ ಮಾಡುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಷುಗರ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, ಉನ್ನತ ಹುದ್ದೆಯಲ್ಲಿರುವ ಎಚ್.ಕೆ. ಉಮೇಶ, ಪಿ.ಎಸ್. ರವಿ, ಸಿ. ರಾಜು, ಸುರೇಶ್ ಬಾಬು, ಕೆ.ಎಂ. ನಾಗೇಶ್, ಡಾ. ಎಂ. ಮಾದಯ್ಯ ಹಾಗೂ ನಿವೃತ್ತ ಶಿಕ್ಷಕರಾದ ಎಂ.ಎಸ್. ಮನ್ನಾರ್ ಕೃಷ್ಣರಾವ್, ಪ್ರೊ. ಗುಬ್ಬಯ್ಯ, ಚಿಕ್ಕಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮೈಷುಗರ್ ಶಾಲೆ ಕುರಿತು ನಿವೃತ್ತ ಶಿಕ್ಷಕ ಲಿಂಗಣ್ಣ ಬಂಧುಕಾರ್ ಅವರ ಸಂಪಾದಕತ್ವದ ಪುಸ್ತಕವನ್ನು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಲೋಕಾರ್ಪಣೆ ಮಾಡಿದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಶಾಸಕ ಎಚ್.ಟಿ. ಮಂಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಸಾಹಿತಿ ಪ್ರೊ. ಎಂ.ಕೃಷ್ಣೇಗೌಡ, ಪದ್ಮಶ್ರೀ ಪುರಸ್ಕೃತ ಕೆ.ಎಸ್. ರಾಜಣ್ಣ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ನಿವೃತ್ತ ಮುಖ್ಯ ಶಿಕ್ಷಕ ಟಿ. ರಮೇಶ್, ಮೈಷುಗರ್ ಪ್ರೌಢಶಾಲಾ ಸಮಿತಿಯ ಬಿ.ಟಿ.ಜಯರಾಮ್, ಪ್ರೊ. ಬಿ.ಕೆ. ಚಂದ್ರಶೇಖರಗೌಡ, ಶಿವಲಿಂಗಯ್ಯ, ಎಸ್.ಸಿ. ಸತ್ಯನಾರಾಯಣರಾವ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ