Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಗ್ ಬಾಸ್ ; ಗ್ರಾಮೀಣ ಸೊಗಡಿನ ಪ್ರತಿಭೆಯ ಗೆಲುವು

ನಾರಾಯಣ್ ಬೆಳಗುರ್ಕಿ, ಸಾಮಾಜಿಕ ಚಿಂತಕರು
ಸಿಂಧನೂರು

ಹನುಮಂತು ಎಂಬ ಉತ್ತರ ಕರ್ನಾಟಕದ ಜವಾರಿ ಹುಡುಗ ಬಿಗ್ ಬಾಸ್ ಸೀಸನ್ 11ರಲ್ಲಿ ವಿನ್ನರ್ ಆಗಿದ್ದಾನೆ. ಆತನ ಪ್ರತಿಭೆಯನ್ನು ಗುರುತಿಸಿ ಜನರು ಮತ ಹಾಕಿದ್ದಾರೆ. ಮುಗ್ಧತೆ, ಸತ್ಯನಿಷ್ಟತೆ, ನೇರ ನಿಷ್ಠುರತೆ, ಪ್ರಾಮಾಣಿಕತೆ, ಪ್ರಬುದ್ಧತೆ, ಕ್ರಮಬದ್ಧತೆ, ಹೊಂದಾಣಿಕೆ, ಹಾಡುಗಾರಿಕೆ, ಮಾತಿನ ಕೌಶಲ್ಯತೆ, ಸ್ನೇಹಪರತೆ, ಹಿರಿಯ ಮತ್ತು ಕಿರಿಯರಿಗೆ ಕೊಡುವ ಗೌರವ, ಅಧ್ಯಾತ್ಮಿಕ ಒಲವು, ಸರಳತೆ, ಮುಂತಾದ ಅನೇಕ ಗುಣಗಳಿಂದ ಇವತ್ತು ಹನುಮಂತು ಗೆದ್ದಿದ್ದಾನೆ. ಕರ್ನಾಟಕದ ಎಲ್ಲಾ ಜನರೂ ನ್ಯಾಯಯುತ ಗೆಲವು ಎಂದು ಸಂತೋಷ ಪಡುತ್ತಿದ್ದಾರೆ. ಕನ್ನಡ ಜನರ ಮನಸು ಗೆದ್ದಿದ್ದು ಅಕ್ಷರಶಃ ನಿಜ.

ನಾನು ಟಿವಿ ಕಾರ್ಯಕ್ರಮಗಳನ್ನು ನೋಡುವವವನಲ್ಲ. ಅದರಲ್ಲೂ ಬಿಗ್ ಬಾಸ್ ಯಾವ ಸೀಸನ್ ನೋಡಿಲ್ಲ ಮತ್ತು ಅಂತ ಜನರ ಪರಿಚಯ ಇಲ್ಲವೇ ಇಲ್ಲ. ಈ ಕಾರ್ಯಕ್ರಮವನ್ನು ಯಾಕೇ ಮಾಡುತ್ತಾರೆ,? ಯಾರು ಭಾಗವಹಿಸುತ್ತಾರೆ, ?ಅವರ ಸೆಲೆಬ್ರಿಟಿ ಕೊಡುಗೆ ಏನು? ಮುಂತಾದ ವಿಷಯಗಳ ಬಗ್ಗೆ ನಾನು ಕಿಂಚಿತ್ತೂ ತಲೆ ಕೆಡಿಸಿಕೊಂಡವನಲ್ಲ. ಒಂದಂತೂ ಸ್ಪಷ್ಟವಾಗಿ ಗೊತ್ತು ಟಿವಿ ಕಾರ್ಯಕ್ರಮಗಳನ್ನು ಟಿ ಆರ್ ಪಿ ಗಾಗಿ ಹಣ ಸಂಪಾದನೆ ಮಾಡಲು ಮಾಡುತ್ತಾರೆ ಎಂಬುದು.

ಅದರೆ ಈ ಸಾರಿ ಎರಡು ಕಾರಣಗಳಿಗೆ ಬಿಗ್ ಬಾಸ್ ಸೀಸನ್ 11 ನ್ನು ಅಲ್ಲಲ್ಲಿ ಗಮನಿಸಿದೆ. ಒಂದು ಲಾಯರ್ ಜಗದೀಶ್ ರಾಜಕೀಯ,ಅನ್ಯಾಯ, ಅಕ್ರಮ ಅಂತ ಸ್ಪಲ್ಪ ಹೆಸರಾಗಿದ್ದ. ಅಂತಾ ವ್ಯಕ್ತಿ ಇಲ್ಲಿ ಬಂದು ಏನು ಮಾಡುತ್ತಾನೆ ಎನ್ನುವ ಕುತೂಹಲ. ಇನ್ನೊಂದು ಈ ಹಾಡುಗಾರ ಹುಡುಗ ಹನುಮಂತು. ಮಿಕ್ಕವರ ಪರಿಚಯ ಇಲ್ಲಾ. ಸಿನಿಮಾ, ಧಾರಾವಾಹಿ ಮಂದಿನ ನೆನಪಿಟ್ಟುಕೊಳ್ಳೋದು ಆಗಲ್ಲ. ಅದು ಅವರವರ ಬದುಕು.
ಈಗ ನಮ್ಮ ಮುಂದೆ ಹನುಮಂತು ಗೆದ್ದು ಜನಮನ್ನಣೆ ಪಡೆದಿರುತ್ತಾನೆ. ಇದಕ್ಕೆ ಒಂದು ವರ್ಗದ ಜನರು ಮಾತ್ರಾ ಈತನ ಗೆಲುವನ್ನು ಅಸೂಯೆ ಪಡುತ್ತಿದ್ದಾರೆ. ಅಂತಹವರು ಅಸೂಯೆ ಮಾಡುವಂತೆ ಹನುಮಂತ ಗೆದ್ದಿರುವುದು ಗಮನಿಸಬೇಕಾದ ವಿಷಯ. ಇಲ್ಲಿ ಅಸೂಯೆ ಪಡುವ ಜನರು ನಾಟಕೀಯ ಆಟಕ್ಕೆ ಒತ್ತು ಕೊಡುತ್ತಿದ್ದಾರೆ, ನೈಜತೆಗೆ ಈ ಮಂದಿ ದೂರ ಇರುವವರು ಅಂತ ಅನಿಸುತ್ತದೆ.

ಕನ್ನಡದ ಅಸ್ಮಿತೆ ಜಾನಪದ , ಹಳ್ಳಿ ಸೊಗಡು, ನಿತ್ಯ ಬದುಕಿನ ಸರಳತೆ, ದುಡಿಮೆ ಮುಂತಾದ ವಿಷಯಗಳ ಗೆಲವು ಇದಾಗಿದೆ. ಬರೀ ತಳುಕು ಬಳುಕು, ಕಾರ್ಪೊರೇಟ್ ಜೀವನದ ಭ್ರಮೆಯಲ್ಲಿ ತೇಲುವ ಜನರ ಸೋಲು ಇದಾಗಿದೆ. ಅದರ ಹಿಂದಿನ ಜೀವನ ವಿಧಾನವೇ ಗಂಭೀರ ನಾಟಕೀಯತೆಯಿಂದ ಕೂಡಿದೆ ಅಂತ ಕನ್ನಡದ ಜನರಿಗೆ ಗೊತ್ತಾಗಿದ್ದು ಈ ಸೀಸನ್ ನ ವಿಶೇಷತೆ.

ಕೇವಲ ಜಗಳ, ಕಿರಿ ಕಿರಿ,ವೈಮನಸ್ಸು ಉಂಟು ಮಾಡಿ ದುಡ್ಡು ಮಾಡುವ ಬಿಗ್ ಬಾಸ್ ಗೆ ಈ ಸಾರಿ ಎನೋ ಮಾಡಲು ಹೋಗಿ ಇನ್ನೇನೋ ಮಾಡಿ ಕೊನೆಗೆ ಹನುಮಂತನ ಗೆಲವು ಆಗಿ ಆ ಮೂಲಕ ಹೆಂಗೋ ಬಿಗ್ ಬಾಸ್ ಯಶಸ್ವಿ ಪ್ರೋಗ್ರಾಂ ಭರ್ಜರಿ ಗೆಲುವಾಗಿದ್ದಕ್ಕೆ ಕಾರಣವಾಯಿತು. ಹನುಮಂತ ಬರದೆ ಇದ್ದರೇ ಇದು ಗಂಭೀರ ಸೋಲು ಆಗುತಿತ್ತು ಎಂಬುದರಲ್ಲಿ ಸಂಶಯವಿಲ್ಲ.

ನಗರ ಕೇಂದ್ರಿತ ಕಾರ್ಪೊರೇಟ್ ಜೀವನದ ಜನರು ಕನ್ನಡ ಸಂಸ್ಕೃತಿ,ಅಸ್ಮಿತೆ, ಪ್ರಾಮಾಣಿಕತೆ ಸರಳತೆಯಂತ ಮೌಲ್ಯಗಳನ್ನು ಅಳವಡಿಸಿಕೊಳ್ಳವಂತ ಮನಸ್ಥಿತಿ ಬರಲಿ. ಮಾಯಾಲೋಕ ಶಾಶ್ವತ ಅಲ್ಲ ಎಂಬುದು ಮನವರಿಕೆ ಆಗಲಿ. ಹನುಮಂತನ ಬಗ್ಗೇ ಅಸೂಯೆ ಪಡುವ ಅಗತ್ಯವಿಲ್ಲ ಕಾರಣ ನೀವು ಸರಿ ದಾರಿ ತುಳಿಯುವ ಅಗತ್ಯವಿದೆ. ಇದರ ಅರ್ಥ ಆತ ಎಲ್ಲಾ ರೀತಿಯಲ್ಲೂ ಪರಿಪೂರ್ಣನಂದು ಆತನ ಅನುಸರಿಸಬೇಕೆಂದಲ್ಲ. ಅದನ್ನೂ ಮೀರಿ ವಿಷಯಗಳನ್ನು ನೋಡಬೇಕು ಎಂದು. ಈ ಗೆಲವನ್ನು ನಿಜಕ್ಕೂ ಗ್ರಾಮೀಣ ಭಾರತದ ಗೆಲುವು ಅಂತಾ ಹೇಳಬಹುದು. ಏನೇ ಆಗಲಿ ನೈಜವಾಗಿ ಆಟ ಆಡಿ ಗೆದ್ದ ಹನುಮಂತನಿಗೆ ಶುಭಾಶಯಗಳು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ