ಹನಿಯಂಬಾಡಿ ಜಗದೀಶ್
ಕೇರಳದ ವಯನಾಡ್ ಸೇರಿದಂತೆ ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೊಡಗಿನ ಕುಶಲನಗರದ ಬಳಿಯಿರುವ ಹಾರಂಗಿ ಅಣೆಕಟ್ಟೆ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ, ಇದರಿಂದಾಗಿ ಸಹಜವಾಗಿಯೇ ಕೆ.ಆರ್.ಎಸ್ ಅಣೆಕಟ್ಟೆಯ ಒಳಹರಿವಿನ ಮಟ್ಟ ಹೆಚ್ಚಳವಾಗಿದೆ.
ಹಾರಂಗಿ ಜಲಾಶಯವು ಈ ಭಾರಿ ಜೂನ್ ಮೂರನೇ ವಾರದಲ್ಲೇ ಭರ್ತಿಯಾಗಿದೆ. ಜಲಾಶಯದ ಸುರಕ್ಷತೆಗಾಗಿ 4 ಕ್ರಸ್ಟ್ಗೇಟ್ಗಳ ಮೂಲಕ 4,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕೊಡಗು ಜಿಲ್ಲಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಜಲಾಶಯಕ್ಕೆ 3,184 ಕ್ಯೂಸೆಕ್ ಒಳ ಹರಿವಿದೆ. 2,859 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ, ಸದ್ಯ 2,852 ಅಡಿ ನೀರನ್ನು ಸಂಗ್ರಹಿಸಲಾಗಿದೆ.
ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ pic.twitter.com/XyfxXtLy2m
— Coorg The Kashmir of Karnataka (@Coorgthekashmir) June 14, 2025
“>
ಪ್ರತಿ ವರ್ಷ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಹಾರಂಗಿ ಜಲಾಶಯ ಭರ್ತಿಯಾಗುವುದು ವಾಡಿಕೆ. ಆದರೆ ಈ ಬಾರಿ ಮೇ ಅಂತ್ಯದಿಂದಲೇ ಉತ್ತಮ ಮಳೆಯಾದ ಹಿನ್ನೆಲೆ ಜಲಾಶಯ ಅವಧಿಗೆ ಮುನ್ನವೇ ಬಹುತೇಕ ಭರ್ತಿಯಾಗಿದೆ.
ಒಳಹರಿವು ಹೆಚ್ಚಳ

ಮುಂಗಾರು ಆರಂಭದಲ್ಲಿ ಮೇ ಅಂತ್ಯದಲ್ಲಿಯೇ ಅಬ್ಬರಿಸಿದ್ದರಿಂದ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳ ಕಂಡು ಕೆ.ಆರ್.ಎಸ್ ಅಣೆಕಟ್ಟೆಯ ನೀರಿನ ಮಟ್ಟ 100 ಗಳನ್ನು ಅಡಿ ದಾಟಿತ್ತು, ಆನಂತರ ಮುಂಗಾರು ಕೆಲ ದಿನಗಳ ಕಾಲ ಬಿಡುವು ನೀಡಿದ್ದರಿಂದ ಒಳಹರಿವಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಪ್ರಸ್ತುತ ಹಮಾಮಾನ ಇಲಾಖೆಯ ಒಂದು ವಾರಗಳ ಕಾಲ ರಾಜ್ಯದಲ್ಲಿ ಮುಂಗಾರು ಅಬ್ಬರಿಸಲಿದೆ ಎಂಬ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ, ಮೊನ್ನೆಯಿಂದ ಕೊಡಗು ಭಾಗದಲ್ಲಿ ಗಣನೀಯ ಮಳೆಯಾಗಿ ಹಾರಂಗಿ ಭರ್ತಿಯಾಗಿದೆ.
ಕೆ.ಆರ್.ಎಸ್ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ : 124.80 ಅಡಿ
ಇಂದಿನಮಟ್ಟ : 109.60 ಅಡಿ
ಗರಿಷ್ಟ ಸಂಗ್ರಹ ಸಾಮರ್ಥ್ಯ : 49.452 ಟಿ.ಎಂ.ಸಿ
ಇಂದಿನ ಸಂಗ್ರಹ : 31.322 ಟಿ.ಎಂ.ಸಿ.
ಒಳ ಹರಿವು : 6.,631 ಕ್ಯೂಸೆಕ್
ಹೊರ ಹರಿವು : 915 ಕ್ಯೂಸೆಕ್
ನಿನ್ನೆಯಷ್ಟೆ 3,377 ಕ್ಯೂಸೆಕ್ ಇದ್ದ ಕೆ.ಆರ್.ಎಸ್ ಒಳಹರಿವಿನ ಪ್ರಮಾಣ ಹಾರಂಗಿ ಅಣೆಕಟ್ಟೆಯ ಹೆಚ್ಚುವರಿ ನೀರು ಬಿಡುಗಡೆಯಿಂದಾಗಿ ಇಂದು (ಜೂ.16 ಬೆಳಿಗ್ಗೆ 8 ಗಂಟೆಗೆ) 6,631 ಕ್ಯೂಸೆಕ್ ತಲುಪಿದೆ. ಪ್ರಸ್ತುತ ಕೆ.ಆರ್.ಎಸ್ ಅಣೆಕಟ್ಟೆಯ ನೀರಿನ ಮಟ್ಟ 109.60 ಅಡಿ ಇದೆ.




