ಪ್ರತಿ ಬಾರಿ ಚುನಾವಣೆಯಲ್ಲಿಯೂ ರಾಜ್ಯದ ಗಮನ ಸೆಳೆಯುವ ಮಂಡ್ಯ ಜಿಲ್ಲೆಯೂ ಈ ಬಾರಿಯೂ ಚುನಾವಣೆಯ ರಣಾರಂಗವಾಗಿ ಮಾರ್ಪಡುವ ಸಾಧ್ಯತೆಗಳೇ ಹೆಚ್ಚಾಗಿವೆ.
ಕಳೆದ ಬಾರಿ ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ, ಈ ಬಾರಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮನದ ನೀರಿಕ್ಷೆಯಲ್ಲಿ ಹಣಾಹಣಿಯ ಅಖಾಡವಾಗುವ ಸಾಧ್ಯತೆ ಇದೆ.
ನಿನ್ನೆಯಷ್ಟೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮಗಾಗಿ ಅಂತಿಮವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಖಾಡಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ಸ್ಪಷ್ಟಪಡಿಸಿವೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಜೆಡಿಎಸ್ ಪಾಳಯದ ನಿದ್ದೆಗೆಡಿಸಿದ್ದು, ಸ್ಥಳೀಯ ಅಭ್ಯರ್ಥಿಗೆ ಬದಲು ದಳಪತಿ ಕುಮಾರಸ್ವಾಮಿ ಅವರನ್ನು ಅಖಾಡಕ್ಕಿಳಿಸಿದರೆ ಮಂಡ್ಯವನ್ನು ಮರಳಿ ಪಡೆಯಬಹುದು ಎಂಬ ಲೆಕ್ಕಾಚಾರ ದಳಪತಿಗಳದ್ದಾಗಿದೆ.
ಅಮಿತ್ ಶಾ ಹೇಳಿದ್ದೇನು ?
ಮೈತ್ರಿ ಹೊಂದಾಣಿಕೆಯ ಸಹ ಪಕ್ಷ ಬಿಜೆಪಿಯ ವರಿಷ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಗ್ರಹಿಸಿರುವ ವರದಿ ಪ್ರಕಾರ ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಬೇಕಾದರೆ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯಬೇಕು. ಸ್ಥಳೀಯ ಅಭ್ಯರ್ಥಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಉಂಟಾಗಬಹುದಾದ ಹಿನ್ನಡೆ ತಪ್ಪಿಸಲು ಕುಮಾರಸ್ವಾಮಿ ಸ್ಪರ್ಧೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಮುಂದಾಗಿರುವ ಬಿಜೆಪಿ ವರಿಷ್ಠರು ಕುಮಾರಸ್ವಾಮಿ ಸ್ಪರ್ಧೆಗೆ ತಾಕೀತು ಮಾಡಿದ್ದಾರೆಂದು ತಿಳಿದು ಬಂದಿದೆ.
ಹೃದಯ ಶಸ್ತ್ರ ಚಿಕಿತ್ಸೆಗಾಗಿ ತಮಿಳುನಾಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕುಮಾರಸ್ವಾಮಿ ಅವರು ಚಿಕಿತ್ಸೆ ನಂತರ ಮಾ.24ಕ್ಕೆ ಆಸ್ಪತ್ರೆಯಿಂದ ಮನೆಗೆ ಮರಳಿ, ಮಾ.25ರಂದು ಮಂಡ್ಯಕ್ಕೆ ಬಂದು ಅಧಿಕೃತ ಅಭ್ಯರ್ಥಿಯಾಗುವ ಬಗ್ಗೆ ಘೋಷಣೆ ಮಾಡಲಿದ್ದಾರೆಂದು ತಿಳಿದು ಬಂದಿದೆ.
ಪುಟ್ಟರಾಜುಗೂ ಸೂಚನೆ
ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿರುವ ಕುಮಾರಸ್ವಾಮಿ ಅವರಿಗೆ ವೈದ್ಯರು, ವಿಶ್ರಾಂತಿ ಅವಧಿಯನ್ನು ವಿಸ್ತರಿಸಿದರೆ ಅನಿವಾರ್ಯವಾಗಿ ಬದಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆದಿದ್ದು, ಒಂದೊಮ್ಮೆ ಅನಿವಾರ್ಯವಾದರೆ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರ ಸ್ಪರ್ಧೆಗೆ ಅನುವು ಮಾಡಿಕೊಡಲು ತಂತ್ರಗಾರಿಕೆ ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.




