ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯತೆ ನಮಗಿಲ್ಲ, ಮಾಜಿ ಸಚಿವ ಪುಟ್ಟರಾಜು ಸ್ವಕ್ಷೇತ್ರ ಪಾಂಡವಪುರದಲ್ಲಿ ಇವೆಂಟ್ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಿದ್ದರು, ಇದರಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಇವರು ರೈತರಿಗೆ ಹೊಸ ಮಾದರಿಯ ನಾಟಿ ಕಲಿಸಲು ಮುಂದಾಗಿರಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಜಿ.ಪಂ.ಕಾವೇರಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೂಲತಃ ಕೃಷಿಕ ಕುಟುಂಬದವನು ಟ್ರಾಕ್ಟರ್ ಓಡಿಸುತ್ತೇನೆ, ಉಳುಮೆ ಮಾಡುತ್ತೇನೆ, ಆದರೆ ನೇಗಿಲು ಕಟ್ಟುವುದನ್ನು ಸ್ವಲ್ಪ ಮರೆತಿದ್ದೇನೆ. ಕುಮಾರಸ್ವಾಮಿ ಕೆಲವರನ್ನು ಮೆಚ್ಚಿಸಲು ಹೊಸ ಮಾದರಿ ಕಬ್ಬು ಮತ್ತು ಭತ್ತ ನಾಟಿಗೆ ಚಾಲನೆ ನೀಡಿರಬಹುದು ಎಂದು ಮೂದಲಿಸಿದರು.
ರಾಜಕೀಯದಲ್ಲಿ ಹೆಚ್ಚು ಆಸಕ್ತಿ
ಇಂದಿನ ಪ್ರಗತಿ ಪರಿಶೀಲನಾ ಸಭೆಗೆ ಕುಮಾರಸ್ವಾಮಿ ಗೈರಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸತ್ಯ ಹೇಳಿದರೆ ಕೆಲವರಿಗೆ ಮೆಣಸಿನಕಾಯಿ ಇಟ್ಟಂತೆ ಆಗುತ್ತೆ, ಹಿಂದೇ ಸಂಸದರಾಗಿದ್ದಾಗ, ಮುಖ್ಯಮಂತ್ರಿ ಆಗದ್ದಾಗ ರಾಮನಗರದಲ್ಲಿ ಸಭೆ ನಡೆಸಿರುವ ಮಾಹಿತಿ ಅರಿತರೇ ಸತ್ಯಾಂಶ ತಿಳಿಯುತ್ತದೆ. ಕುಮಾರಸ್ವಾಮಿ ಅವರಿಗೆ ರಾಜಕೀಯದ ಸಭೆ ಸಮಾರಂಭಗಳಲ್ಲಿ ಇರುವ ಆಸಕ್ತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲ್ಲ ಎಂದು ಲೇವಡಿಯಾಡಿದರು.
ಟೀಕಿಸುವುದೇ ಕೆಲಸವಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಏಕವಚನದಲ್ಲಿ ಟೀಕೆ -ಟಿಪ್ಪಣಿ ಮೂಲಕ ನಿಂದಿಸಲು ಸಂಸತ್ ಸದಸ್ಯ ಸ್ಥಾನ ಹಾಗೂ ಕೇಂದ್ರ ಸಚಿವ ಸ್ಥಾನವನ್ನು ದುಬರ್ಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು, ಹೆಚ್.ಡಿ.ಕೆ ಅವರ ತಪ್ಪುಗಳನ್ನು ಸರಿಪಡಿಸುವ ಕ್ರಿಯೆ ಯಾರಿಂದಲೂ ಆಗುತ್ತಿಲ್ಲ, ದೇಶದುದ್ದಕ್ಕೂ ಪ್ರವಾಸ ನಡೆಸಿ, ಸಚಿವ ಗಾದಿಗೆ ನ್ಯಾಯ ಸಲ್ಲಿಸಬೇಕಾದ ಕುಮಾರಸ್ವಾಮಿ ಅವರು ವಾರದ ಮೂರು ದಿನ ಸಿಎಂ ಹಾಗೂ ಡಿಸಿಎಂ ನಿಂದಿಸಲು ಬಳಕೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ, ನಾವು ಅವರ ಜೊತೆ ಇದ್ದಾಗ ತಪ್ಪಿನ ಮನವರಿಕೆ ಮಾಡಿಕೊಡುತ್ತಿದ್ದೇವು ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಅನುದಾನ, ಕೃಷಿ ವಿ.ವಿ ಸ್ಥಾಪನೆಗೆ ಅನುಮತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ, ಅದೇ ರೀತಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಲು ಸಹಕಾರ ನೀಡಿದ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಲಘುವಾಗಿ ನಿಂದಿಸುವುದು ಮಾಜಿ ಪ್ರಧಾನಿಯ ಕುಟುಂಬಸ್ಥರಿಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.
ಪ್ರಜ್ವಲ್ ಪ್ರಕರಣದ ಸಿ.ಡಿ ಹಂಚಿಕೆ ವಿಚಾರವಾಗಿ ಒಂದು ಬಾರಿ ಪ್ರೀತಂ ಗೌಡ ಮತ್ತೊಂದು ಬಾರಿ ಮಹಾ ನಾಯಕ ಡಿ.ಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸುವ ಕುಮಾರಸ್ವಾಮಿ ಉದ್ಯಮಿ ಸಿದ್ದಾರ್ಥ ಸಾವಿನ ಬಗ್ಗೆ ಎಸ್.ಎಂ.ಕೃಷ್ಣ ಕುಟುಂಬದ ಹಿತೈಷಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸುವುದು ಕುಮಾರಸ್ವಾಮಿ ಮನಸ್ಥಿತಿಯನ್ನು ಅರ್ಥೈಸುತ್ತದೆ ಎಂದರು.
ದೇವರು ಕ್ಷಮಿಸುವುದಿಲ್ಲ
ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಹೊರಿಸಿದರೆ ಕುಮಾರಸ್ವಾಮಿ ಅವರನ್ನು ದೇವರು ಕ್ಷಮಿಸುವುದಿಲ್ಲ, 1996ರ ಲೋಕಸಭಾ ಚುನಾವಣೆ ಹಾಗೂ ಚನ್ನಪಟ್ಟಣ ಮತ್ತು ರಾಮನಗರದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಯವರನ್ನು ಡಿ.ಕೆ.ಶಿ ಬೆಂಬಲಿಸಿಲ್ಲವೇ ? ಎಂದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಕುರಿತು ಕುಮಾರಸ್ವಾಮಿ ಮಾಡಿದ ಆರೋಪಗಳು ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಕುಮಾರಸ್ವಾಮಿಯವರನ್ನು ನಾಗರಹಾವು ಎಂದು ಕರೆದಿದ್ದನ್ನು ರಾಜ್ಯದ ಜನ ಮರೆತಿಲ್ಲ, ಆದರೆ ಕುಮಾರಸ್ವಾಮಿ ಏಕವಚನದ ಬೈಗುಳ ನಡೆಸುವುದು ಗೌರವ ತರುವುದಿಲ್ಲ ಎಂದರು.
ರಾಜ್ಯದ ಜನರು ಬಿಜೆಪಿ ಆಡಳಿತದಿಂದ ರೋಸಿಹೋಗಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು 136 ಶಾಸಕರನ್ನು ಚುನಾಯಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆ ಇದನ್ನು ಗೌರವಿಸಬೇಕಾದ ವಿಪಕ್ಷ ನಾಯಕರು ಪದೇ ಪದೇ ಸರ್ಕಾರ ತಗೆಯುವ ಮಾತನಾಡುವುದು ಅವರಿಗೆ ಶೋಭೆಯೇ ಎಂದರು.
ನಾವು ವಿಪಕ್ಷದಲ್ಲಿದ್ದಾಗ ಪೇ ಸಿಎಂ, ಪಿಎಸ್’ಐ ಹಗರಣ, ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರಗಳ ವಿರುದ್ದ ಹೋರಾಟ ಮಾಡಿದ್ದೇವು. ಅದೇ ರೀತಿ ನಮ್ಮ ಸರ್ಕಾರದ ತಪ್ಪು ನಡೆಗಳ ವಿರುದ್ದ ಹೋರಾಟ ಮಾಡುವ ಹಕ್ಕು ವಿಪಕ್ಷಗಳಿಗಿದೆ. ಆದರೆ ಮೈಸೂರು ಮುಡಾ ಪ್ರಕರಣವನ್ನು ಹಗರಣವಾಗಿ ಬಿಂಬಿಸುವುದು ಹಲವು ಬಿಜೆಪಿ ನಾಯಕರಿಗೆ ಸರಿಕಾಣುತ್ತಿಲ್ಲ, ಇದು ವಿಪಕ್ಷ ನಾಯಕರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ವಿಷಯಾಧಾರಿತವಾಗಿ ಪಾದಯಾತ್ರೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ, ಅದನ್ನು ಬಿಟ್ಟು ಬಿ.ವೈ.ವಿಜಯೇಂದ್ರ ಹಾಗೂ ನಿಖಿಲ್ ಅವರನ್ನು ರಾಜಕೀಯವಾಗಿ ಬಿಂಬಿಸಲು ಪಾದಯಾತ್ರೆ ನಡೆಸಿದರೆ ನಾವು ಸುಮ್ಮನಿರಬೇಕೇ ? ಪಾದಯಾತ್ರೆ ಬಗ್ಗೆ ಯತ್ನಾಳ್ ಹಾಗೂ ಪ್ರತಾಪ್ ಸಿಂಹ ಅಸಹನೆ ವ್ಯಕ್ತಪಡಿಸಿಲ್ಲವೇ ? ಎಂದರು.
ಪಾದಯಾತ್ರೆಗೆ ಆರಂಭದಲ್ಲಿ ಅಪಸ್ವರ ತೆಗೆದ ಕುಮಾರಸ್ವಾಮಿ 2ನೇ ದಿನ ವಿಧಿಯಿಲ್ಲದೇ ಬೆಂಬಲ ಸೂಚಿಸಿದರು. ನಮ್ಮ ಸರ್ಕಾರರದ ಬಗ್ಗೆ ಸುಳ್ಳು ಆರೋಪ ಮಾಡುವ ಮೈತ್ರಿ ಪಕ್ಷಗಳ ಕಾಲದ ಹಗರಣಗಳ ಬಗ್ಗೆ ತನಿಖೆ ನಡೆಸುವ ಕಾಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ಮುಡಾ ಅಧ್ಯಕ್ಷ ನಹೀಂ, ಮುಖಂಡ ಸಿ.ಎಂ.ದ್ಯಾವಪ್ಪ ಮತ್ತಿತರರಿದ್ದರು.




