ಮಂಡ್ಯ ಜನಕ್ಕೆ ನಾನೇನು ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಉನ್ನತ ಸ್ಥಾನದಲ್ಲಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದು, ಅವರು ಮಾಡಲು ಸಾಧ್ಯವಾಗದಿದ್ದರೆ ಸಚಿವ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜೆ ರಾಜೇಶ್ ಒತ್ತಾಯಿಸಿದರು.
ನಾಗಮಂಗಲ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಂಪೇಗೌಡರ ಜಯಂತಿಯನ್ನು ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಆಚರಿಸುವುದನ್ನು ಸಹಿಸದ ದೇವೇಗೌಡರ ಕುಟುಂಬದವರಿಗೆ ಸುಳ್ಳೇ ಮನೆದೇವರಾಗಿದೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ನಾಯಕತ್ವದ ವಿಚಾರದಲ್ಲಿ ನಮ್ಮದು ಯಾವುದೇ ತಕರಾರಿಲ್ಲ. ನಾಗಮಂಗಲ ಪುರಸಭೆಯಿಂದ ಅನುಮತಿ ಪಡೆದು ಕೆಂಪೇಗೌಡ ಜಯಂತಿಯ ಬ್ಯಾನರ್ ಗಳನ್ನು ನಾವು ಕಟ್ಟಿದ್ದೆವು. ಅದರ ಮೇಲೆ ಅನಧಿಕೃತವಾಗಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನದ ಬ್ಯಾನರ್ ಗಳನ್ನು ಕಟ್ಟುವ ಕೆಲಸ ಮಾಡಿದ್ದರು, ಅನಧಿಕೃತ ಬ್ಯಾನರ್ ಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸುವ ಕಾರ್ಯ ಮಾಡಿದ್ದಕ್ಕೆ ಸಚಿವರು ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಮುಖಂಡ ಶರತ್ ರಾಮಣ್ಣ ಬ್ಯಾನರ್ ವಿಚಾರದಲ್ಲಿ ತಕರಾರು ತೆಗೆಯುವ ಮೂಲಕ ತಿಳಿಯಾಗಿರುವ ನಾಗಮಂಗಲ ರಾಜಕೀಯ ವಾತಾವರಣದ ಮೇಲೆ ಕಲ್ಲೆಸುವ ಪ್ರಯತ್ನವನ್ನು ಜೆಡಿಎಸ್ ಕಾರ್ಯಕರ್ತರು ಮಾಡುತ್ತಿರುವುದು ಖಂಡನೀಯ ಎಂದರು.
ನಾವು ಇದೇ ಜೂನ್ 26 ರಂದು ಪುರಸಭೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯ ಬ್ಯಾನರ್ ಗಳನ್ನು ಕಟ್ಟಲು ಅನುಮತಿ ಪಡೆದು ಬ್ಯಾನರ್ ಕಟ್ಟಿದ್ದೆವು. ಅದರ ಮೇಲೆ ಜೆಡಿಎಸ್ ನವರು ಓವರ್ಲಾಕ್ ಮಾಡಿ ಬ್ಯಾನರ್ ಗಳನ್ನು ಕಟ್ಟಿರುತ್ತಾರೆ. ಈ ವಿಚಾರವಾಗಿ ನಾವು ಬ್ಯಾನರ್ ಕಟ್ಟಿಸಿದ ಆದಿ ಪ್ರಿಂಟರ್ಸ್ ನವರಿಗೂ ಹಾಗೂ ಜೆಡಿಎಸ್ ಮುಖಂಡರಿಗೂ ತಿಳಿಸಿದ್ದೆವು. ಆಗ ಜೆಡಿಎಸ್ ಮುಖಂಡ ತೆಂಗಿನಭಾಗ ಮಂಜುನಾಥ್ ರವರೇ ಪುರಸಭಾ ಸಿಬ್ಬಂದಿಯ ಮೂಲಕ ಬ್ಯಾನರ್ ಗಳನ್ನು ತೆರವುಗೊಳಿಸಿ ಕೊಡಿ ನಾವು ಸೂಕ್ತ ಸ್ಥಳದಲ್ಲಿ ಕಟ್ಟುತ್ತೇವೆ ಎಂದು ವಿನಂತಿಸಿಕೊಂಡಿದ್ದರು, ಇದನ್ನು ಅರಿಯದ ಕೆಲವು ಜೆಡಿಎಸ್ ಮುಖಂಡರು ಚಲುವರಾಯಸ್ವಾಮಿರವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡುವುದು ಸೂಕ್ತವಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕ್ಯಾಬಿನೆಟ್ ದರ್ಜೆಯ ಕೃಷಿ ಸಚಿವರು ಇಂತಹ ಕೃತ್ಯಗಳಿಗೆ ಭಾಗಿಯಾಗುವುದಿಲ್ಲ,ಕಾರ್ಯಕರ್ತರನ್ನು ಸಹ ಪ್ರೇರೇಪಿಸುವುದೂ ಇಲ್ಲ ಎಂದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಇದ್ದರು.




