ಮದ್ದೂರು ತಾಲ್ಲೂಕಿನ ವಿವಿಧೆಡೆ ಕಳೆದ ರಾತ್ರಿ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ ಕೋಟ್ಯಾಂತರ ರೂ.ಗಳ ನಷ್ಟ ಸಂಭವಿಸಿದೆ.
ಕೆ.ಎಂ.ದೊಡ್ಡಿಯ ಸಮೀಪದ ಚಿಕ್ಕರಸಿನಕೆರೆ ಸೂಳೆಕೆರೆ ಹೆಬ್ಬಾಳದಲ್ಲಿ ಅಧಿಕ ಪ್ರಮಾಣದ ನೀರು ಹರಿದು ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಕೋಟ್ಯಾಂತರ ನಷ್ಟ ಸಂಭವಿಸಿದೆ.
ಹೆಬ್ಬಾಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ನೂರಾರು ಎಕರೆ ಜಮೀನು ಮುಳುಗಡೆಯಾಗಿದೆ, ಇದರಿಂದ ರೈತರಿಗೆ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ.
ರೈತರು ಜಮೀನಿನಲ್ಲಿ ಬೆಳೆದಿದ್ದ ಕಬ್ಬು, ಭತ್ತ ಸೇರಿದಂತೆ ಹಲವು ಬೆಳೆಗಳು ನೀರಿನ ಪಾಲಾಗಿವೆ. ಇದಲ್ಲದೆ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಕ್ಷೇತ್ರದ ಅನ್ನ ದಾಸೋಹ ಭವನಕ್ಕೆ ನೀರು ನುಗ್ಗಿ ಜಲಾವೃತಗೊಂಡಿದೆ.

ಹೆಬ್ಬಾಳದ ಪಕ್ಕದಲ್ಲೆ ಇರುವ ದಾಸೋಹ ಭನಕ್ಕೆ ನೀರು ನುಗ್ಗಿದ್ದರಿಂದ ಪ್ರತಿದಿನ ನಡೆಯುತಿದ್ದ ದಾಸೋಹ ರದ್ದಾಗಿದೆ.
ದಾಸೋಹಕ್ಕೆ ನೀರು ನುಗ್ಗಿರುವ ಹಿನ್ನಲೆಯಲ್ಲಿ ದೇವಾಲಯದ ಪಕ್ಕದ ಹೆಬ್ಬಾಳಕ್ಕೆ ತಡೆಗೋಡೆ ನಿರ್ಮಿಸುವಂತೆ ಶ್ರೀ ಕಾಲಭೈರವೇಶ್ವರ ಅಭಿವೃದ್ಧಿ ಸಮಿತಿಯ ಸದಸ್ಯ ಚಿಕ್ಕರಸಿನಕೆರೆಯ ಯಜಮಾನ್ ಶಿವಲಿಂಗೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೂಳೆಕೆರೆ ಹೆಬ್ಬಾಳದ ಮಳೆ ನೀರು ಜಮೀನುಗಳಿಗೆ ನುಗ್ಗಿ ಲಕ್ಷಾಂತರ ನಷ್ಟ ಉಂಟಾಗಿದ್ದು ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಯುವ ಮುಖಂಡ ಗುರುದೇವರಹಳ್ಳಿ ಅರವಿಂದ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸೂಳೆ ಕೆರೆ ಹೆಬ್ಬಾಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಕ್ಯಾತಘಟ್ಟ-ಆಲಭುಜನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಿಂದ ಮುಳುಗಡೆಯಾಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಮಂಡ್ಯ ತಾಲೂಕು ಹಳೇಬೂದನೂರು ಕೆರೆ ಕೋಡಿ ಒಡೆದ ಹಿನ್ನಲೆಯಲ್ಲಿ ನೀರು ಬೆಂಗಳೂರು-ಮೈಸೂರು ಹೆದ್ದಾರಿಗೆ ನುಗ್ಗಿದ ಹಿನ್ನಲೆಯಲ್ಲಿ ವಾಹನಗಳನ್ನು ಭಾರತೀನಗರದ ಮೂಲಕ ತೆರಳುವಂತೆ ಸೂಚಿಸಿದ ಕಾರಣ ಮದ್ದೂರು-ಭಾರತೀನಗರ-ಮಂಡ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.




