ದೇಶದ ರೈತರಿಗೆ ಬೆನ್ನೆಲುಬಾಗಿರುವ ವಿಶ್ವಕರ್ಮ ಸಮುದಾಯವು ಕೃಷಿಗೆ ಬೇಕಾದ ಸಲಕರಣೆಗಳನ್ನು ಒದಗಿಸುವ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆಂದು ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಇಂಡುವಾಳು ಸಚ್ಚಿದಾನಂದ ಸ್ಮರಿಸಿದರು.
ಶ್ರೀರಂಗಪಟ್ಟಣದ ಶ್ರೀಕಾಳಿಕಾಂಬ ದೇವಸ್ಥಾನದ ಮುಂಭಾಗದ ಆವರಣದಲ್ಲಿ ವಿಶ್ವಕರ್ಮ ಸಮುದಾಯ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವದ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮರ ಕಲೆ ನಶಿಸಿ ಹೋಗದಂತೆ ಕುಲಕಸುಬು ಉಳಿಸಿಕೊಂಡು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುಂತಾಗಬೇಕು, ಸಮುದಾಯದ ಟ್ರಸ್ಟ್ ಗೆ 5 ಲಕ್ಷ ರೂಪಾಯಿಗಳ ಧನಸಹಾಯ ಹಾಗೂ ಕಾಳಿಕಾಂಬ ದೇವಾಲಯ ಜೀರ್ಣೋದ್ಧಾರಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡುವುದಾಗಿ ಘೋಷಣೆ ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ವಿಶ್ವಕರ್ಮ ಮಹಿಳಾ ಘಟಕದ ಉಪಾಧ್ಯಕ್ಷೆ ಸುಧಾಮಣಿ ಮಾತನಾಡಿ, ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ, ಅಭಿಮಾನಿಗಳ ಕೆ.ಪಿ ನಂಜುಂಡಿಯವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಸಂಘದ ಗೌರವ ಅಧ್ಯಕ್ಷ ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವಕರ್ಮ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ತಹಶೀಲ್ದಾರ್ ಶ್ವೇತ ಎನ್.ರವೀಂದ್ರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚರ್ಮವಾದ್ಯ, ವೀರಗಾಸೆ, ಸಿದ್ದಪ್ಪಾಜಿ ಕಂಡಾಯ ,ಕೀಲುಗೊಂಬೆ ಮೆರಗಣಿಗೆ, ಬೆಳ್ಳಿ ರಥದಲ್ಲಿ ವಿಶ್ವಕರ್ಮ ಮೂರ್ತಿಯ ಮೆರವಣಿಗೆಯು ಪಟ್ಟಣದ ಮುಖ್ಯಬೀದಿಯಲ್ಲಿ ಸಂಚರಿಸಿತು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಹೊಸೂರು ಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಗೆಂಡೆಹೊಸಳ್ಳಿ ರಾಜಶೇಖರ್, ಲೋಕೇಶ್, ಗಂಜಾಮ್ ಕೃಷ್ಣಾಚಾರಿ, ಕೂಡಲಕುಪ್ಪೆ ಸೋಮಶೇಖರ್, ಅರಕೆರೆ ದೇಶಿ ಚಲುವಾಚಾರಿ ಹಾಗೂ ಪ್ರಧಾನ ಅರ್ಚಕ ಮಂಜುನಾಥ್, ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕುಬೇರಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಸಂಘಟನೆಯ ಪ್ರತಿನಿಧಿಗಳು ಹಾಜರಿದ್ದರು.




