ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು. ಹಿಂದೂ,ಮುಸ್ಲಿಂ ಬಾಂಧವರು ಸಹೋದರರಂತೆ ಇದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಅವರ ಸಹೋದರತ್ವಕ್ಕೆ ಬೆಂಕಿ ಹಚ್ಚಬೇಡಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಮಂಡ್ಯ ನಗರದ ಔಷಧ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಮುಸಲ್ಮಾನ ಬಂಧುಗಳಿಗಾಗಿ ಏರ್ಪಡಿಸಿದ್ದ ಸೌಹಾರ್ದತಾ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ರಾಜ್ಯದಲ್ಲಿ ಆಡಳಿತ ಹಳಿತಪ್ಪಿದೆ. ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿರುವ ಹಿಂದೂ-ಮುಸಲ್ಮಾನರ ಭ್ರಾತೃತ್ವಕ್ಕೆ ಬೆಂಕಿ ಹಚ್ಚಿದ್ದಾರೆ. ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ನಡೆಸಬೇಕೆಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನ ಬಂಧುಗಳ ಕೊಡುಗೆ ದೊಡ್ಡದು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಮಾನವ ಧರ್ಮವೇ ದೊಡ್ಡದು. ನಾಡಿನ ಸಾಮರಸ್ಯಕ್ಕೆ ಧಕ್ಕೆ ತರಬೇಡಿ ಎಂದರು.
ಬುದ್ಧ,ಬಸವಣ್ಣ, ಅಂಬೇಡ್ಕರ್, ಮಹಮದ್ ಪೈಗಂಬರ್, ಯೇಸುಕ್ರಿಸ್ತ, ನಂಜುಂಡ ಸ್ವಾಮಿ, ಕೆ.ಎಸ್.ಪುಟ್ಟಣಯ್ಯರವರ ಆಶಯದಂತೆ ನಾವೆಲ್ಲರೂ ಒಂದಾಗಿ ಕೋಮು ಸಾಮರಸ್ಯಕ್ಕೆ ಹೋರಾಡ ಬೇಕಿದೆ ಎಂದು ಕರೆ ನೀಡಿದರು.
ಮುಸ್ಲಿಮರ ಜೊತೆ ಸ್ನೇಹ ಮಾಡಬಾರದು,ವ್ಯಾಪಾರ ಮಾಡಬಾರದು ಎಂದೆಲ್ಲಾ ಹೇಳುವುದು ಸರಿಯಲ್ಲ. ಹಲಾಲ್ ಕಟ್ ಮಾಂಸ ತಿನ್ನುವುದು ಬಿಡುವುದು ಜನರಿಗೆ ಬಿಟ್ಟಿದ್ದು. ಇಂತದ್ದನ್ನೆ ತಿನ್ನಬೇಕೆಂದು ಹೇಳುವುದು ಸರಿಯಲ್ಲ. ಇತ್ತೀಚಿಗೆ ರಾಜ್ಯ ದಲ್ಲಿ ಕಲುಷಿತ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಸರ್ಕಾರ ಸಂವಿಧಾನದ ಪ್ರಕಾರ ಆಡಳಿತ ನಡೆಸಲಿ ಎಂದರು.
ವಕೀಲ ಜಗನ್ನಾಥ್ ಮಾತನಾಡಿ,ಜರ್ಮನಿಯ ಹಿಟ್ಲರ್ ಯಹೂದಿಗಳಿಗಿಂತ ಆರ್ಯನ್ ಜನಾಂಗವೇ ಶ್ರೇಷ್ಠ. ನಿಮಗೆ ಅಚ್ಚೇದಿನ ಕೊಡ್ತಿನಿ ಅಂತ ಹೇಳಿ ಜರ್ಮನ್ನರನ್ನು ನಂಬಿಸಿ ಅಧಿಕಾರಕ್ಕೆ ಬಂದ.
ಯಹೂದಿಯರನ್ನು ಕೊಂದು ಕೊನೆಗೆ ಇಡೀ ಜರ್ಮನಿಯನ್ನು ಸರ್ವ ನಾಶ ಮಾಡಿದ. ಆಗಲೇ ಜರ್ಮನ್ನರು ಇದನ್ನೆಲ್ಲಾ ಪ್ರಶ್ನೆ ಮಾಡಿದ್ದರೆ ಜರ್ಮನಿ ನಾಶವಾಗುತ್ತಿರಲಿಲ್ಲ ಎಂದರು.
ಇಂದು ನಮ್ಮ ಭಾರತದಲ್ಲೂ ಕೋಮು ಸಾಮರಸ್ಯಕ್ಕೆ ಬೆಂಕಿ ಹಚ್ಚುವ ಪ್ರಯತ್ನ ನಡೆಯುತ್ತಿದೆ. ದಿನೇ ದಿನೇ ಒಂದಲ್ಲಾ ಒಂದು ಕೋಮು ಗಲಭೆಗಳು ನಡೆಯಿತ್ತಿರುವ ಸಂದರ್ಭದಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಹಿಂದೂ – ಮುಸಲ್ಮಾನರು ಸಹೋದರರಂತೆ ಎಂಬ ಸಂದೇಶ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಧುಚಂದನ್, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರಸನ್ನ, ಕರ್ನಾಟಕ ಜನಶಕ್ತಿಯ ಸಿದ್ದರಾಜು,ಅಕ್ರಂ ಪಾಷ, ಸಲೀಂ ಮತ್ತಿತರರಿದ್ದರು.