Friday, October 25, 2024

ಪ್ರಾಯೋಗಿಕ ಆವೃತ್ತಿ

ಒಡಿಶಾ ಕರಾವಳಿಗೆ ಅಪ್ಪಳಿಸಿದ ‘ಡಾನಾ ಚಂಡಮಾರುತ’ : 8 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

‘ಡಾನಾ ಚಂಡಮಾರುತ’ ಗುರುವಾರ (ಅ.24) ಮಧ್ಯರಾತ್ರಿ ಒಡಿಶಾದ ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಮತ್ತು ಧಮ್ರಾ ನಡುವೆ ಕರಾವಳಿಗೆ ಅಪ್ಪಳಿಸಿದೆ. ಆ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 110 ರಿಂದ 120 ಕಿಲೋ ಮೀಟರ್ ಇತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಚಂಡಮಾರುತದ ಪರಿಣಾಮ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು (ಅ.25) ಮುಂಜಾನೆಯ ಹೊತ್ತಿಗೆ ಚಂಡಮಾರುತವು ಪಶ್ಚಿಮ-ವಾಯುವ್ಯ ಒಡಿಶಾದ ಕಡೆಗೆ ಬೀಸುತ್ತಾ ದುರ್ಬಲಗೊಂಡಿದೆ. ಪರಿಸ್ಥಿತಿಯ ಕುರಿತು ಒಡಿಶಾದ ಪಾರಾದೀಪ್‌ನಲ್ಲಿನ ಡಾಪ್ಲರ್ ಹವಾಮಾನ ರಾಡಾರ್‌ ನಿರಂತರ ಕಣ್ಗಾವಲಿಟ್ಟಿದೆ.

ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸುತ್ತಿದ್ದಂತೆ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಭದ್ರಕ್ ಮತ್ತು ಕೇಂದ್ರಪಾರ ಜಿಲ್ಲೆಗಳಲ್ಲಿ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಈ ಜಿಲ್ಲೆಗಳಲ್ಲಿ ಹಲವಾರು ರಸ್ತೆಗಳಿಗೂ ಹಾನಿಯಾಗಿದೆ.

“>

 

ಗುರುವಾರ ಚಂಡಮಾರುತ ಅಪ್ಪಳಿಸುವ ಮುನ್ನ ಮುಂಜಾಗೃತ ಕ್ರಮವಾಗಿ ಒಡಿಶಾ ಕರಾವಳಿಯಾದ್ಯಂತ ಅಪಾಯಕಾರಿ ಪ್ರದೇಶಗಳಿಂದ 5,84,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸರ್ಕಾರ ಸ್ಥಳಾಂತರಿಸಿದೆ. ಪಶ್ಚಿಮ ಬಂಗಾಳ ಸರ್ಕಾರವು ಕೂಡ 2,50,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಚಂಡಮಾರುತದಿಂದಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ.

ಇಂದು (ಶುಕ್ರವಾರ) ಚಂಡಮಾರುತದಿಂದಾಗಿ ಒಡಿಶಾದ ಬಾಲೇಶ್ವರ್, ಮಯೂರ್‌ಭಂಜ್, ಭದ್ರಕ್, ಕೇಂದ್ರಪಾರಾ, ಜಗತ್‌ಸಿಂಗ್‌ಪುರ, ಕೆಂದುಜಾರ್, ಜಾಜ್‌ಪುರ್, ಕಟಕ್, ಧೆಂಕನಲ್, ಖುರ್ದಾ ಮತ್ತು ಪುರಿ ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣಗಳು, ಪೂರ್ವ ಮತ್ತು ಪಶ್ಚಿಮ ಮೇದಿನಿಪುರ್, ಜಾರ್‌ಗ್ರಾಮ್, ಹೌರಾ, ಹೂಗ್ಲಿ, ಕೋಲ್ಕತ್ತಾ ಮತ್ತು ಬಂಕುರಾ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!