ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ತನ್ನ ಪತ್ನಿಯನ್ನೇ ಕತ್ತುಕೊಯ್ದು ಹತ್ಯೆ ಮಾಡಿದ್ದ ಆರೋಪಿಗೆ ಮಂಡ್ಯದ 4 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಿರುಗಾವಲು ಸಮೀಪದ ಕಲ್ಕುಣಿ ಗ್ರಾಮದ ಲೇಟ್ ನಿಂಗಯ್ಯ ಅವರ ಮಗ ಕುಮಾರಸ್ವಾಮಿ ಅಲಿಯಾಸ್ ಕುಮಾರ ಜೀವಾವಧಿ ಶಿಕ್ಷೆ ಗುರಿಯಾದವನು.
ಘಟನೆಯ ವಿವರ
ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಕುಮಾರಸ್ವಾಮಿ ಅಲಿಯಾಸ್ ಕುಮಾರ್ ಗೆ ಕಿರುಗಾವಲು ಗ್ರಾಮದ ರಾಜಣ್ಣರ ಹಿರಿಯ ಮಗಳು ಸೌಮ್ಯಳನ್ನು 2009 ಮೇ 3 ರಂದು ವಿವಾಹ ಮಾಡಿಕೊಟ್ಟಿದ್ದರು. ಮದುವೆಯಾದ ನಂತರ ಕುಮಾರಸ್ವಾಮಿ ಕೆಲ ವರ್ಷಗಳ ಕಾಲ ಚೆನ್ನಾಗಿ ನೋಡಿಕೊಂಡಿದ್ದು, ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಸೌಮ್ಯಾಳ ಜೊತೆ ಪ್ರತಿನಿತ್ಯ ಜಗಳ ತೆಗೆದು ಹೊಡೆಯುತ್ತಿದ್ದ. ಇದರಿಂದ ಬೇಸತ್ತ ಸೌಮ್ಯ 2019ರಲ್ಲಿ ಶಿವರಾತ್ರಿ ಹಬ್ಬದ ದಿನ ಮಕ್ಕಳಾದ ಬಿಂದುಧರ ಹಾಗೂ ಯಮುನಾಳನ್ನು ಕರೆದುಕೊಂಡು ತನ್ನ ತವರು ಮನೆಯಾದ ಕಿರುಗಾವಲಿಗೆ ಬಂದು ತನ್ನ ತಂದೆ- ತಾಯಿಯೊಂದಿಗೆ ವಾಸವಾಗಿದ್ದರು.
ಕಿರುಗಾವಲಿನ ತನ್ನ ತಂದೆ ಮನೆಯಿಂದ ಸೌಮ್ಯ ಮಳವಳ್ಳಿಯ ಬಟ್ಟೆ ಅಂಗಡಿ ಕೆಲಸಕ್ಕೆ ಹೋಗಿ ಬರುತ್ತಿದ್ದಳು. 2019 ಜೂನ್ 23 ರಂದು ರಾತ್ರಿ 9 ಗಂಟೆಯ ಸಮಯದಲ್ಲಿ ಕುಮಾರಸ್ವಾಮಿ ಪತ್ನಿ ಸೌಮ್ಯ ತವರಿಗೆ ಬಂದು ಊಟ ಮಾಡಿ, ಹಿಂದಿನ ಮನೆಯಲ್ಲಿ ಪತ್ನಿ ಸೌಮ್ಯ ಜೊತೆಗೆ ಮಲಗಿದ್ದ. ಮಾರನೇ ದಿನ ಬೆಳಿಗ್ಗೆ 6.50 ಗಂಟೆಯ ಸಮಯದಲ್ಲಿ ಕುಮಾರಸ್ವಾಮಿ ಆಕ್ಸಲ್ ಬ್ಲೇಡ್‌ನಿಂದ ಸೌಮ್ಯಳ ಕತ್ತನ್ನು ಕೊಯ್ದು ಕೊಲೆ ಮಾಡಿದ್ದ. ಈ ಹಿನ್ನಲೆಯಲ್ಲಿ ಕಿರುಗಾವಲು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸರು ನಡೆಸಿದ್ದ ತನಿಖೆ ಹಾಗೂ ಸಾಕ್ಷ್ಯಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮಳವಳ್ಳಿ ತನಿಖಾಧಿಕಾರಿ ಸಿಪಿಐ ಎಂ. ಧರ್ಮೇಂದ್ರ ಅವರು ಆರೋಪಿ ಕುಮಾರಸ್ವಾಮಿ ವಿರುದ್ದ ಐಪಿಸಿ ಕಲಂ. 498(ಎ), 302 ರ ಅಡಿ ದೋಷಾರೋಪಣೆ ಸಲ್ಲಿಸಿದ್ದರು.
ಈ ಪ್ರಕರಣವು ಮಂಡ್ಯದ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಿರ್ಮಲ.ಕೆ ಅವರ ಮುಂದೆ ವಿಚಾರಣೆ ಬಂದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅಲಿಯಾಸ್ ಕುಮಾರನಿಗೆ ಐಪಿಸಿ ಕಲಂ. 302 ರ ಅಡಿಯಲ್ಲಿನ ಕೊಲೆ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 40,000 ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸತಕ್ಕದ್ದು ಎಂದು ಆದೇಶಿಸಲಾಗಿದೆ. ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಶ್ರೀ ಎಸ್. ಶೆಣೈ ವಾದ ಮಂಡಿಸಿದ್ದರು.




