ಮಕ್ಕಳಲ್ಲಿರುವ ಪ್ರತಿಭೆಯನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಮುಂದೆ ಉತ್ತಮ ಹೆಸರು ಮಾಡಿ, ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದು ಶಾಸಕ ಗಣಿಗ ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಡ್ಯ ದಕ್ಷಿಣ ವಲಯ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ನಗರದ ಪೊಲೀಸ್ ಕಾಲೋನಿಯ ಬಡಾವಣೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 2025- 26ನೇ ಸಾಲಿನ ದಕ್ಷಿಣ ವಲಯ ವ್ಯಾಪ್ತಿಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ನಾವು ಓದುತ್ತಿರುವಾಗ ಪ್ರಥಮ, ದ್ವಿತೀಯ ಹಾಗೂ ತೃತೀಯ ದರ್ಜೆಯಲ್ಲಿ ಪಾಸಾದರೂ ಒಂದು ಮೌಲ್ಯವಿರುತ್ತಿತ್ತು. ಆದರೆ ಇಂದು ಎಲ್ಲರೂ ಚೆನ್ನಾಗಿ ಓದಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗುತ್ತಿದ್ದಾರೆ. ಆದರೆ ಅವರಿಗೆ ಪೈಪೋಟಿ ಹೆಚ್ಚಾಗಿರುವುದರಿಂದ ಸರಿಯಾದ ಕೆಲಸ ಸಿಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಮಕ್ಕಳು ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರಗಿಡಬೇಕು. ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ,ಅವರು ದೇಶದಲ್ಲಿ ಉತ್ತಮ ಹೆಸರು ಮಾಡಲು ಸಾಧ್ಯವಾಗುತ್ತದೆ ಎಂದರು.
ಇಂದು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ. ನಮ್ಮ ಸರ್ಕಾರ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಮಕ್ಕಳಿಗಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಮಂಡ್ಯ ಕ್ಷೇತ್ರಕ್ಕೆ ಸರ್ಕಾರ ಮೂರು ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿದೆ. ಕೆಪಿಎಸ್ ಶಾಲೆಗಳಿಗೆ 4 ಕೋಟಿ ರೂ. ಅನುದಾನವನ್ನು ನೀಡಿದೆ.ಈಗಾಗಲೇ ಮಂಡ್ಯ ನಗರದಲ್ಲಿ ಒಂದು ಕೆಪಿಎಸ್ ಶಾಲೆ ಪ್ರಾರಂಭವಾಗಿದೆ. ಮುಂದಿನ ವರ್ಷ ಮತ್ತೊಂದು ಕೆಪಿಎಸ್ ಶಾಲೆ ಪ್ರಾರಂಭವಾಗಲಿದ್ದು, ಮಕ್ಕಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಶುಭ ಹಾರೈಸಿದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಅಧ್ಯಕ್ಷತೆ ವಹಿಸಿದ್ದರು. ಡಯಟ್ ಉಪ ನಿರ್ದೇಶಕರಾದ (ಆಡಳಿತ ವಿಭಾಗ) ಕೆ.ಯೋಗೇಶ್,ಎಂ.ಇ ಶಿವಣ್ಣ, ಮಧುಸೂಧನ್, ಆರ್. ಜೆ.ರಾಮ್, ಶಿವಕುಮಾರ್, ನಾಗರಾಜು, ಡಿ.ಎನ್ ನಂದೀಶ್, ಆರ್.ಎ ಚಂದ್ರಶೇಖರ್, ಕೆ.ವಿ ನಿಂಗರಾಜು, ಸುನಿತಾ, ಶಬಾನ, ನಾಗರಾಜು, ಎಸ್ . ಉಮೇಶ್, ಡಿ.ಗಿರೀಶ್, ಎ.ಎಂ ಶ್ರೀದೇವಿ, ಕೆ.ಆರ್ ರಮೇಶ್, ಅಶೋಕ್, ಕೆ. ಜೆ ರಮೇಶ್, ಕೆ.ಬಿ ಆಶಾರಾಣಿ, ವೈ. ಸಿ ಉಮೇಶ್, ಟಿ.ಕೆ ನಾಗರಾಜು ಇನ್ನಿತರರಿದ್ದರು.




