ಮೈಸೂರು-ಬೆಂಗಳೂರು ಹೆದ್ದಾರಿಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದ ಬಳಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮವಾಗಿ ಅಂಗಡಿ ಹಾಗೂ ಮನೆಗಳನ್ನು ನಿರ್ಮಿಸುತ್ತಿದ್ದು, ಅವರ ವಿರುದ್ದ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಗ್ರಾ.ಪಂ. ಮಾಜಿ ಸದಸ್ಯ ಬೂದನೂರು ಸತೀಶ್ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಗ್ರಾಮದಲ್ಲಿ ಹಲವು ಆಸ್ತಿಗಳು ಭೂಸ್ವಾಧೀನವಾಗಿವೆ. ಆದರೆ ಕೆಲವರು ಭೂ ಸ್ವಾಧೀನಾಧಿಕಾರಿಗಳು ಸ್ವಾಧೀನಪಡಿಸಿಕೊಂಡಿರುವ ಭೂಮಿ ಹಾಗೂ ವಸತಿಯಲ್ಲಿ ತೆರವುಗೊಳಿದೇ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಬೂದನೂರು ಗ್ರಾಮಸ್ಥ ಶಶಿಕುಮಾರ್ ಎಂಬುವವರು ಮಾತನಾಡಿ, ನಮ್ಮ ಮನ ಪಕ್ಕದಲ್ಲಿ ಜಲಜ ಶಿವನಂಜು ಎಂಬುವವರು ಗ್ರಾಮ ಪಂಚಾಯತಿ ಪರವಾನಗಿ ಇಲ್ಲದೇ ಅಕ್ರಮವಾಗಿ ಮನ ನಿರ್ಮಿಸುತ್ತಿದ್ದಾರೆ. ಅಲ್ಲದೆ ನಮ್ಮ ಮನೆಯ ಪಕ್ಕದಲ್ಲಿ ಗಲ್ಲಿ ಹಾಗೂ ಚರಂಡಿಗೆ ಬಿಟ್ಟಿರುವ ಜಾಗಕ್ಕೆ, ನಾವು ಇಲ್ಲದ ವೇಳೆ ಸಿಮೆಂಟ್ ಕಾಂಕ್ರೀಟ್ ಕಂಬ ಅಳವಡಿಸಿ ತೀವ್ರ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ದೂರು ನೀಡಿದರೆ, ಅವರು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಅಕ್ರಮ ಮನೆ ನಿರ್ಮಾಣಕ್ಕೆ ತಡೆಯೊಡ್ಡಬೇಕು, ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ವಕೀಲ ಜೆ.ರಾಮಯ್ಯ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹೆಷ್.ಡಿ.ಜಯರಾಂ, ಗ್ರಾಮಸ್ಥರಾದ ಸಿದ್ದಪ್ಪ, ಪವಿತ್ರ ಉಪಸ್ಥಿತರಿದ್ದರು.




