ಅಕ್ರಮವಾಗಿ ಜಮೀನು ಪರಭಾರೆ ಮಾಡಿರುವ ಅಧಿಕಾರಿಗಳಿಗೆ ಹಾಗೂ ಮಾಡಿಕೊಂಡಿರುವವರಿಗೆ ಶಿಕ್ಷೆಯಾಗಲಿ ಎಂದು ಶಾಸಕ ಡಾ ಕೆ.ಅನ್ನದಾನಿ ತಿಳಿಸಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಿಂದ ಇಲ್ಲಿಯವರೆಗೂ ಅಕ್ರಮವಾಗಿ ಭೂಮಿ ಪರಭಾರೆ ಮಾಡಿರುವ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ. ಅಕ್ರಮದಲ್ಲಿ ಯಾವ ಪಕ್ಷದವರೇ ಇರಲಿ ತನಿಖೆ ನಡೆದು ಶಿಕ್ಷೆಯಾಗಲಿ. ಜೆಡಿಎಸ್ ಪಕ್ಷದ ಮುಖಂಡರು ಅಥವಾ ಕಾರ್ಯಕರ್ತರು ಭ್ರಷ್ಟಚಾರದಲ್ಲಿ ತೊಡಗಿಲ್ಲ ಮತ್ತು ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಪರಭಾರೆ ಮಾಡಿಕೊಂಡಿಲ್ಲ, ಅಕ್ರಮ ಮಾಡಿಕೊಂಡಿದ್ದಾರೆ ಎನ್ನುವುದಿದ್ದರೆ ತರಲಿ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ ನಾನು ಇಂದಿಗೂ ರಾಜಕೀಯ ಮಾಡುತ್ತಿದ್ದೇನೆಂದು ಒಪ್ಪಿಕೊಳ್ಳುತ್ತೇನೆ, ನಿಮ್ಮಂತೆ ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬ ನಾಯಕನ ಹೆಸರನ್ನು ಹೇಳುವುದಿಲ್ಲ, ಸಿದ್ದರಾಮಯ್ಯ ಅವರ ಹೆಸರನ್ನು ಹೇಳದೇ ರಾಜಕೀಯ ಮಾಡಿ ತೋರಿಸಿ, ತಮ್ಮ ಅಧಿಕಾರ ಅವಧಿಯಲ್ಲಿ ಅತಿ ಹೆಚ್ಚು ಜಾತಿನಿಂದನೆ ಪ್ರಕರಣ ಆಗಿರುವುದು ನಿಮ್ಮ ಅವಧಿಯಲ್ಲಿ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಿ ಎಂದರು.
ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪ ಮಾಡುತ್ತೀರಿ, ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್‌ಗೆ ಸಿಕ್ಕಿಬಿದ್ದ ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದ್ದವನು, ಮೂಗನಕೊಪ್ಪಲು ಹಾಗೂ ಮಾರೇಹಳ್ಳಿಯಲ್ಲಿ ಜಮೀನುಗಳನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವವರು ನಿಮ್ಮ ಪಕ್ಷದವರೇ ಆಗಿದ್ದಾರೆ.ವೈಯಕ್ತಿಕ ಮತ್ತು ರಾಜಕೀಯ ಎರಡು ಜಿದ್ದಾಜಿದ್ದಿಗೂ ನಾನು ಸಿದ್ದವಿದ್ದೇನೆ ಎಂದು ಸವಾಲು ಹಾಕಿದರು.
ತನ್ನ ಅಧಿಕಾರ ಅವಧಿಯಲ್ಲಿ ಒಂದು ಯೋಜನೆಯನ್ನು ನಿಲ್ಲಿಸಲಿಲ್ಲ.ಕಿರುಗಾವಲು ಕುಡಿಯುವ ನೀರಿನ ಯೋಜನೆ, ಪೂರಿಗಾಲಿ ಹನಿ ನೀರಾವರಿ ಯೋಜನೆ, ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಸದ್ಯದಲ್ಲಿಯೇ ಅಂತಿಮಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದು ಸ್ವಷ್ಟಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿಕಂಸಾಗರ, ನಂದಕುಮಾರ್, ಪದ್ಮಮ್ಮ, ಸದಾನಂದ, ಸಿದ್ದಚಾರಿ, ಮಲ್ಲೇಗೌಡ, , ಪುಟ್ಟುಬುದ್ದಿ ಸೇರಿದಂತೆ ಇತರರಿದ್ದರು.




