ಜಿಲ್ಲೆಯಲ್ಲಿ ಇದುವರೆಗೂ ನಡೆದಿರುವ ಅಕ್ರಮ ಗಣಿಗಾರಿಕೆಯ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ನಿರ್ಣಯಗಳನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು.
ಮಂಡ್ಯ ನಗರದ ಗಾಂಧಿಭವನದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಮುಖಂಡರ ನೇತೃತ್ವದಲ್ಲಿ ಕೆಆರ್‌ಎಸ್ ಜಲಾಶಯ ಉಳಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಸಿದ್ಧಗೊಳಿಸುವ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕನ್ನಂಬಾಡಿ ಜಲಾಶಯಕ್ಕೆ ಅಪಾಯ ಎದುರಾದರೂ ಸರಿ,ಅಕ್ರಮ ಗಣಿಗಾರಿಕೆಯಿಂದ ಹಣ ಮಾಡಿರುವ ಕೆಲವರಿಗೆ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡಿ ಮತ್ತಷ್ಟು ಲೂಟಿ ಹೊಡೆಯಬೇಕಿದೆ.
ಹಾಗಾಗಿ ಅವರೇ ಮುಂದೆ ನಿಂತು ಎಲ್ಲವನ್ನು ಮಾಡುತ್ತಿದ್ದಾರೆ ಹೀಗಾದರೆ ಕನ್ನಂಬಾಡಿ ಆಣೆಕಟ್ಟೆ ಕೆಲವೇ ವರ್ಷಗಳಲ್ಲಿ ನಾಶವಾಗ ಇದೆ ಎಂದರು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 2018ರಲ್ಲಿ ನೀಡಿರುವ ಮುನ್ನೆಚ್ಚರಿಕೆಯಂತೆ ಕೆಆರ್‌ಎಸ್ ವ್ಯಾಪ್ತಿಯ 25 ಕಿ.ಮೀ ಸುತ್ತಳತೆಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಬೇಕು.
ಜಿಲ್ಲೆಯಲ್ಲಿ ಇದುವರೆಗೂ ನಡೆದಿರುವ ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಕೆಆರ್‌ಎಸ್ ವ್ಯಾಪ್ತಿಯ ಹಲವು ಸ್ಥಳಗಳಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದ ಜಿಲ್ಲಾಡಳಿತ ಜನರ ಹೋರಾಟ ಹಾಗೂ ವಿರೋಧಗಳಿಗೆ ಮಣಿದು ಪರೀಕ್ಷಾರ್ಥ ಸ್ಫೋಟ ರದ್ದುಪಡಿಸಿರುವುದು ಸ್ವಾಗತಾರ್ಹ.
ಆದರೆ ಇನ್ನು ಮುಂದೆ ಯಾವುದೇ ಪರೀಕ್ಷಾರ್ಥ ಸ್ಫೋಟಗಳನ್ನು ಜಿಲ್ಲಾಡಳಿತ ನಡೆಸಬಾರದು. ಅಕ್ರಮ ಗಣಿಗಾರಿಕೆಯಿಂದ ಹಲವಾರು ಮಂದಿ ದುರ್ಮರಣ ಹೊಂದಿರುವ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಒದಗಲಿರುವ ಅಪಾಯಗಳ ಬಗ್ಗೆ ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದಲ್ಲಿ ದೊಡ್ಡ ಹೋರಾಟ ರೂಪಿಸಲಾಗುವುದು. ಕೆಆರ್‌ಎಸ್ ಅಣೆಕಟ್ಟೆ ಒಂದು ವರ್ಷಗಳಷ್ಟು ಹಳೆಯದಾಗಿರುವುದರಿಂದ ಹಲವು ಗಂಭೀರ ಅಪಾಯಗಳನ್ನು ಎದುರಿಸುವಂತಾಗಿದ್ದು.
ಈ ವಿಷಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿಯವರ ಗಮನ ಸೆಳೆಯಲು ರೈತಮುಖಂಡರ ನಿಯೋಗ ತೆರಳಿ ಮನವರಿಕೆ ಮಾಡಿಕೊಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಚಿಂತಕ ಹುಲ್ಕೆರೆ ಮಹದೇವು, ಆರ್.ಪ್ರಸನ್ನಗೌಡ, ಎಸ್.ಸಿ.ಮಧುಚಂದನ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ, ಜಯರಾಂ, ಎಂ.ವಿ.ರಾಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಬಸವರಾಜು ಸೇರಿದಂತೆ ಮತ್ತಿತರರಿದ್ದು ಸಲಹೆ ಸೂಚನೆ, ಅಭಿಪ್ರಾಯಗಳನ್ನು ಮಂಡಿಸಿದರು.