ಪಂಚರತ್ನ ಯೋಜನೆಗಳ ಮೂಲಕ ರಾಜ್ಯದ ಎಲ್ಲಾ ವರ್ಗದ ಜನರ ಏಳಿಗೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಮುಂದಾಗಿದ್ದು, ಪಂಚರತ್ನ ಯೋಜನೆ ಜಾರಿಗೊಳಿಸಲು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದು ಕಲ್ಪನಾ ರಾಮಚಂದ್ರು ಮನವಿ ಮಾಡಿದರು.
ಮಂಡ್ಯ ತಾಲ್ಲೂಕಿನ ಗಂಟಗೌಡನಹಳ್ಳಿ, ಗುಡಿಗೇನಳ್ಳಿ ಹಾಗೂ ಹಂಪಾಪುರ ಗ್ರಾಮದಲ್ಲಿ ಪಂಚರತ್ನ ಯೋಜನೆಯ ಪ್ರಣಾಳಿಕೆಯನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಜನರ ಅಭಿವೃದ್ಧಿಗಾಗಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯೋಜನೆ ಸಿದ್ಧಪಡಿಸಿದ್ದಾರೆ.ಮಕ್ಕಳಿಗೆ ಒಳ್ಳೆಯ ಶಾಲೆ,24 ಗಂಟೆ ಸೇವೆ ನೀಡುವ ಆಸ್ಪತ್ರೆ, ಮನೆಯಿಲ್ಲದವರಿಗೆ ಮನೆ,ರೈತರ ಸಾಲ ಮನ್ನಾ,ಮನೆ ಇಲ್ಲದವರಿಗೆ ಉಚಿತ ವಸತಿ, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಿದ್ದಾರೆ ಎಂದು ಜನರಿಗೆ ತಿಳಿಸಿದರು.
ಶಂಭು ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಬಿ.ಆರ್.ಸುರೇಶ್ ಮಾತನಾಡಿ, ಕುಮಾರಸ್ವಾಮಿ ಅವರು ಬಡವರು,ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಹಿತಕ್ಕಾಗಿ ಪಂಚರತ್ನ ಯೋಜನೆ ಜಾರಿಗೆ ತರಲು ಮುಂದಾಗಿದ್ದು,ಈ ಕಾರ್ಯಕ್ರಮಗಳ ಜಾರಿಗಾಗಿ ಜನರು ಆಶೀರ್ವದಿಸಬೇಕೆಂದು ಕೋರಿದರು.

ಮನ್ಮುಲ್ ಅಧ್ಯಕ್ಷ ರಾಮಚಂದ್ರು ಅವರು ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ.ಇಂದು ಅವರ ಪತ್ನಿ ಕಲ್ಪನಾ ರಾಮಚಂದ್ರು ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಬಂದಿರುವುದು ಸಂತೋಷದ ಸಂಗತಿ ಎಂದು ಗ್ರಾಮಸ್ಥರು ಅಭಿಮಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳಾದ ರಾಜೇಶ್, ಜ್ಯೋತಿ ಮುದ್ದರಾಜು, ಸಿದ್ದಪ್ಪ, ಶಿವಕುಮಾರ್, ಸ್ವಾಮಿ, ಕಾರ್ಯದರ್ಶಿ ಮಹದೇವಯ್ಯ, ಯೋಗ ಸೇರಿದಂತೆ ಜೆಡಿಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರಿದ್ದರು.




