Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಎಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ : ಜಿಲ್ಲಾಧಿಕಾರಿ

ಮಂಡ್ಯ ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ನೋಡೆಲ್ ಅಧಿಕಾರಿಗಳು ಹಾಗೂ ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನೋಡೆಲ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಶಾಲೆಗಳಿಗೆ ನೇಮಕ ಮಾಡಿರುವ ತಾಲ್ಲೂಕು ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿವಾರು ಅವರಿಗೆ ಕಷ್ಟವಿರುವ ಹಾಗೂ ಹಿಂದುಳಿದಿರುವ ವಿಷಯಗಳ ಬಗ್ಗೆ ಪಟ್ಟಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಹಾಗೂ ಪರೀಕ್ಷೆಗಳನ್ನು ನಡೆಸಿ ಅವರನ್ನು ಮುಖ್ಯ ಪರೀಕ್ಷೆಗೆ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಸಿದ್ಧಮಾಡಬೇಕು ಎಂದರು.

ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಮಕ್ಕಳೆಂದು ಭಾವಿಸಿ ಬೋಧನೆ ಮಾಡಿ. ಪ್ರತಿಯೊಬ್ಬರೂ ತಾವು ತೆಗೆದುಕೊಳ್ಳುವ ಸಂಬಳಕ್ಕೆ ನ್ಯಾಯಯುತ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಮನಸಾಕ್ಷಿ ಒಪ್ಪುವ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಅಗತ್ಯ ಮಾರ್ಗದರ್ಶನ ನೀಡಿ

ಕಳೆದ ಸಾಲಿನಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಫಲಿತಾಂಶವನ್ನು ಉತ್ತಮಪಡಿಸಲು ತಾಲ್ಲೂಕು ನೋಡಲ್ ಅಧಿಕಾರಿಗಳು ಆಯಾ ತಾಲೂಕುಗಳ ಶಾಲೆಗಳಿಗೆ ಭೇಟಿ ನೀಡಿ ಕಳೆದ ಸಾಲಿನ ಫಲಿತಾಂಶದ ಗುಣಮಟ್ಟವನ್ನು ಪರಿಶೀಲಿಸಿ ಮುಂದಿನ ಶೈಕ್ಷಣಿಕ ಸಾಲಿನ ಫಲಿತಾಂಶವನ್ನು ಉತ್ತಮ ಪಡಿಸಲು ಅಗತ್ಯ ಮಾರ್ಗದರ್ಶನ ನೀಡಬೇಕು. ಕಡಿಮೆ ಸಾಧನೆ ಮಾಡಿರುವ ಶಾಲೆಗಳನ್ನು ಗುರುತಿಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಇಲಾಖೆಯಿಂದ ಸರಬರಾಜು ಆಗಿರುವ ಪರ್ಯಾಯ ಶೈಕ್ಷಣಿಕ ಕಾರ್ಯ ಯೋಜನೆಯಂತೆ ತರಗತಿಗಳ ನಿರ್ವಹಣೆ ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಬೇಕು ಎಂದರು.

ನಿಧಾನಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಮಾಸಿಕ ಪರೀಕ್ಷೆಗಳನ್ನು ನಡೆಸುವುದು ಹಾಗೂ ಪೋಷಕರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಅಣಿಗೊಳಿಸಲು ಅಗತ್ಯ ಯೋಜನೆ ರೂಪಿಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಏರ್ಪಡಿಸುವ ಜೊತೆಗೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದರು.

ಜಿಲ್ಲೆಯಲ್ಲಿ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ 1ರಲ್ಲಿ ಶೇ. 74.54, ಪರೀಕ್ಷೆ 2 ರಲ್ಲಿ 37.94 ರಲ್ಲಿ ಹಾಗೂ ಪರೀಕ್ಷೆ 3 ರಲ್ಲಿ ಶೇ. 42.53 ಫಲಿತಾಂಶವಿದೆ. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಯೂ ಉತ್ತಮ ಫಲಿತಾಂಶ ಬಂದಿರುವುದಿಲ್ಲ. ಈ ಬಾರಿಯು ಕೂಡ ಇದು ಪುನರಾವರ್ತಿತವಾಗದಂತೆ ಪರೀಕ್ಷೆಗೆ ಮಕ್ಕಳಲ್ಲಿ ಆತ್ಮ ವಿಶ್ವಾಸ ನೀಡಿ ಉನ್ನತ ಮಟ್ಟದಲ್ಲಿ ಫಲಿತಾಂಶ ಬರುವಂತೆ ಮಾಡಬೇಕು ಎಂದರು.

ನೋಡಲ್ ಅಧಿಕಾರಿಗಳು ತಮಗೆ ದತ್ತು ನೀಡಲಾಗಿರುವ ಶಾಲೆಗಳ ಮುಖ್ಯಸ್ಥರುಗಳೊಂದಿಗೆ ಪ್ರತಿ ವಾರ ಸಭೆ ನಡೆಸಬೇಕು. ಜೊತೆಗೆ ಪ್ರತಿ ನಿತ್ಯ ಪರಿಹಾರ ಬೋಧನೆ ಹಾಗೂ ವಿಶೇಷ ತರಗತಿಗಳು ಶಾಲೆಗಳಲ್ಲಿ ನಡೆಯುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ವಾಟ್ಸಾಪ್ ಹಾಗೂ ಗೂಗಲ್ ಮೀಟ್ ಆಪ್ ಮೂಲಕ ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಮಾತನಾಡಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಉತ್ತಮಪಡಿಸಲು ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರಿಗೆ ಪುನಶ್ಚೇತನ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. . ಕಲಿಕೆಯಲ್ಲಿ ಹಿಂದುಳಿದಿರುವ ಶಾಲೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿ ನೋಡಲ್ ಅಧಿಕಾರಿಗಳು ಕೈಗೊಂಡಿರುವ ಪ್ರಗತಿಯ ಬಗ್ಗೆ ಮಾಹಿತಿ ಒದಗಿಸಬೇಕು ಎಂದರು.

ಡಯಟ್ ವತಿಯಿಂದ ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರನ್ನು ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಪಾಠ ವೀಕ್ಷಣೆ ಮಾಡಿ ಮಕ್ಕಳ ಕಲಿಕಾ ಪ್ರಗತಿಗಳನ್ನು ಖಾತರಿ ಪಡಿಸಿಕೊಳ್ಳಿ. ಗುಣಾತ್ಮಕ ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರುಗಳನ್ನು ಕಡಿಮೆ ಪಲಿತಾಂಶ ಪಡೆದ ಶಾಲೆಗಳಿಗೆ ನಿಯೋಜಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಶಾಲಾ ಹಂತದಲ್ಲಿ ನಡೆಸುವ ಘಟಕ ಪರೀಕ್ಷೆ, ಕಿರುಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ಸರಣಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಿ ಮಕ್ಕಳ ಸಮಸ್ಯೆಯನ್ನು ಗುರುತಿಸಿ ಉತ್ತಮ ರೀತಿಯಲ್ಲಿ ಪರಿಹಾರ ಬೋಧನೆಯನ್ನು ನಡೆಸಬೇಕು ಎಂದರು.

ಎಸ್ ಎಸ್ ಎಲ್ ಸಿ ಪರೀಕ್ಷೆ 2025 ರ ನೋಂದಣಿ ವಿವರ

ಮಂಡ್ಯ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ 2025 ರ ಸಾಲಿಗೆ ಒಟ್ಟು 20,659 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಕೆ ಆರ್ ಪೇಟೆ ತಾಲ್ಲೂಕಿನಲ್ಲಿ ಗಂಡು – 1493, ಹೆಣ್ಣು – 1308, ಒಟ್ಟು – 2801, ಮದ್ದೂರು ತಾಲ್ಲೂಕು ಗಂಡು – 1860, ಹೆಣ್ಣು – 1702, ಒಟ್ಟು – 3562, ಮಳವಳ್ಳಿ ತಾಲ್ಲೂಕು ಗಂಡು – 1705, ಹೆಣ್ಣು – 1630, ಒಟ್ಟು – 3335, ಮಂಡ್ಯ ದಕ್ಷಿಣ ವಲಯ – ಗಂಡು – 1665, ಹೆಣ್ಣು – 1576, ಒಟ್ಟು – 3241, ಮಂಡ್ಯ ಉತ್ತರ ವಲಯ ಗಂಡು – 662, ಹೆಣ್ಣು- 617, ಒಟ್ಟು – 1279, ನಾಗಮಂಗಲ ಗಂಡು – 1308, ಹೆಣ್ಣು -1091, ಒಟ್ಟು – 2399, ಪಾಂಡವಪುರ ಗಂಡು – 1128, ಹೆಣ್ಣು – 828, ಒಟ್ಟು – 1956, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಗಂಡು – 1097, ಹೆಣ್ಣು – 989, ಒಟ್ಟು – 2086 ವಿದ್ಯಾರ್ಥಿಗಳು ನೋಂದಣಿಯಾಗಿರುತ್ತಾರೆ.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್ ಶಿವರಾಮೇಗೌಡ, ವಿವಿಧ ತಾಲ್ಲೂಕಿನ ಬಿಇಒಗಳು ಹಾಗೂ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ