ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಧ್ಯದಲ್ಲಿ ಬರುವ ಮಂಡ್ಯ ನಗರದಲ್ಲಿ ಹೊಸದಾಗಿ 100 ಬೆಡ್ಗಳ ಟ್ರಾಮಾ ಕೇರ್ ಆಸ್ಪತ್ರೆಯನ್ನು ತೆರೆಯುವಂತೆ ಹಿರಿಯ ರಾಜಕೀಯ ಮುತ್ಸದಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ.

ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಧ್ಯ ಭಾಗದಲ್ಲಿ ಬರುವ ಮಂಡ ನಗರದಲ್ಲಿ 100 ಬೆಡ್ಗಳ ಹೊಸ ಟ್ರಾಮಾ ಕೇರ್ ಆಸ್ಪತ್ರೆಯು ಅವಶ್ಯಕತೆ ಇದ್ದು, ಈ ಹೆದ್ದಾರಿಯು ಸೂಪರ್ ಫಾಸ್ಟ್ ರಸ್ತೆಯಾಗಿದ್ದು, ವಾಹನಗಳು ಹೆಚ್ಚಾಗಿ ಓಡಾಡುವುದರಿಂದ ಅಪಘಾತಗಳು ಸಂಭವಿಸಿದರೆ ಮೈಸೂರು ಅಥವಾ ಬೆಂಗಳೂರಿಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಲು ಬಹಳ ದೂರ ಕ್ರಮಿಸಬೇಕಾಗುತ್ತದೆ. ಆದ್ದರಿಂದ ಟ್ರಾಮಾ ಕೇರ್ ಸ್ಥಾಪಸಲು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಶಿಫಾರಸ್ಸು ಮಾಡುವಂತೆ ಶಾಸಕ ದಿನೇಶ್ ಗೂಳಿಗೌಡ ನೇತೃತ್ವದಲ್ಲಿ ನಿಯೋಗ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಅದರಂತೆ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಮಂಡ್ಯ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದು, ಸುಮಾರು 150 ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸದಾ ಲಭ್ಯವಿರುತ್ತಾರೆ. ಮಂಡ್ಯ ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಇರುವ 5 ಎಕರೆ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸುವುದರಿಂದ ಈ ಜಾಗದಲ್ಲಿ 100 ಬೆಡ್ಗಳ ಟ್ರಾಮಾ ಕೇರ್ ಆಸ್ಪತ್ರೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತ್ವರಿತವಾಗಿ ಹೊಸದಾಗಿ ಪ್ರಾರಂಭಿಸಲು, ಈ ಸಾಲಿನ ಆಯವ್ಯಯದಲ್ಲಿ ಸೇರಿಸಿಬೇಕೆಂದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.




