Saturday, November 21, 2026

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ

ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ತಿಳಿಸಿದರು.

ಇಂದು ದುದ್ದ ಗ್ರಾಮದಲ್ಲಿ ನಡೆದ ಮಂಡ್ಯ ತಾಲ್ಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಂಡ್ಯ ರೈತರ ನಾಡು, ಕನ್ನಡ ಭಾಷೆ ಹಾಗೂ ನಾಡಿನ ಸಂಸ್ಕೃತಿಯನ್ನು ಹೆಚ್ಚು ಬೆಳೆಸುವ ಸ್ಥಳವಾಗಿದೆ. ರೈತ ಸಂಸ್ಕೃತಿಯ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದರಿಂದ ಅದರ ವಿಶೇಷತೆಗಳೇ ಬೇರೆ ಇರುತ್ತದೆ. ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಬೇಕು ಎಂದರು.

ಮಕ್ಕಳಿಗೆ ಬಲವಂತವಾಗಿ ಆಂಗ್ಲ ಭಾಷೆ ಕಲಿಯಲು ಒತ್ತಾಯ ಮಾಡಿದರೆ ಮಕ್ಕಳಲ್ಲಿನ ಮಾನಸಿಕ ಬಲ ಕುಗ್ಗಿ ಹೋಗುತ್ತದೆ‌. ಮಕ್ಕಳ ಆಲೋಚನಾ ಶಕ್ತಿ, ಸೃಜನಶೀಲತೆ ಕುಂದಿ ಹೋಗುತ್ತದೆ.ಕನ್ನಡ ಭಾಷೆಯ ಮಾಧ್ಯಮದಲ್ಲಿ ಓದಿಸಿದರೆ, ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಿದರೆ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಗೌರವ ಬೆಳೆಯುತ್ತದೆ. ಹೊಸ ಹೊಸ ಆಲೋಚನೆಗಳು ಸೃಜನಶೀಲತೆ ಬೆಳೆಯುವುದು ಎಂದರು.

ನಾವು ಮಾತನಾಡುವಾಗ, ಕಲಿಯುವಾಗ, ಪತ್ರಿಕೆಗಳನ್ನು ಓದುವಾಗ, ಸಿನಿಮಾಗಳನ್ನು ನೋಡುವಾಗ, ನಾಟಕಗಳನ್ನು ನೋಡುವಾಗ ಭಾಷೆ ಬೆಳೆಯುತ್ತದೆ. ನಮ್ಮಲ್ಲಿ ಎಲ್ಲೆಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಲು ಸಾಧ್ಯವಾಗುವುದು ಅಲ್ಲಿ ಕನ್ನಡವನ್ನು ಬಳಸಿದರೆ ಅದು ದೊಡ್ಡ ಮಟ್ಟದಲ್ಲಿ ಸಂಸ್ಕೃತಿಯನ್ನು ಸೃಷ್ಟಿ ಮಾಡುತ್ತದೆ ಎಂದರು.

ನಾವು ಕನ್ನಡಿಗರು, ಕನ್ನಡ ಭಾಷೆಯನ್ನು ನಮ್ಮ ತಾಯಿಯ ರೀತಿ ಎಲ್ಲಿಯವರೆಗೆ ಪ್ರೀತಿಸುತ್ತೇವೆಯೋ, ಅಲ್ಲಿಯವರೆಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಯಾರು ಕೂಡ ಧಕ್ಕೆ ತರಲು ಸಾಧ್ಯವಿಲ್ಲ. ಸರ್ಕಾರಿ ಇಲಾಖೆಯ ಅಧಿಕಾರಿಗಳು ಇಂತಹ ಸಮ್ಮೇಳನದ ಅವಕಾಶವನ್ನು ಉಪಯೋಗಿಸಿಕೊಂಡು ಜನಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು ಎಂದರು.

ಸಮ್ಮೇಳನದ ಅಧ್ಯಕ್ಷರಾದ ಡಾ.ಲೀಲಾ ಅಪ್ಪಾಜಿ, ಶಾಸಕ ಸಿ.ಎಸ್. ಪುಟ್ಟರಾಜು, ಸ್ವಾಗತ ಸಮಿತಿ ಅಧ್ಯಕ್ಷರಾದ ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ.ಹಿ.ಶಿ.ರಾಮಚಂದ್ರೇಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಆರ್.ಮಂಜು ಮುತ್ತೇಗೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ