ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಮಕ್ಕಳ ಮನೆ, ಕಂಪ್ಯೂಟರ್ ಕೊಠಡಿ, ಮುಖ್ಯಶಿಕ್ಷಕರ ಕೊಠಡಿಗಳನ್ನು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಶಾಲೆಗಳಿಗೆ ಬೇಕಾದ ಅಗತ್ಯ ಕೊಠಡಿಗಳನ್ನು ಶಿಕ್ಷಣ ಇಲಾಖೆಯ ಅನುದಾನ ಹಾಗೂ ಸ್ಥಳೀಯ ಗ್ರಾಮ ಪಂಚ್ತಾಯಿ ಸಹಯೋಗದಲ್ಲಿ ನಿರ್ಮಾಣ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ತಾಲೂಕಿನ ಪ್ರತಿ ಶಾಲೆಗಳ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕೊಠಡಿ, ಕಾಂಪೌಂಡ್, ಶೌಚಾಲಯ, ಎಲ್ಲವನ್ನು ಕಡ್ಡಾಯವಾಗಿ ಮಾಡಲಾಗುವುದು ಎಂದರು.
ಇನ್ನು ಎರಡೂವರೆ ವರ್ಷದಲ್ಲಿ ತಾಲೂಕಿನ ಪ್ರತಿಯೊಂದು ಶಾಲೆಗಳನ್ನು ಉನ್ನತೀಕರಿಸಿ ಆ ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡುವುದರ ಜೊತೆಗೆ ಖಾಸಗಿ ವ್ಯಕ್ತಿಗಳಿಂದ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಮುಖ್ಯ ಕೆಲಸವಾಗಿದೆ ಎಂದು ತಿಳಿಸಿದರು.
ಈ ವೇಳೆ ಬಿಇಒ ಚಂದ್ರಪಟೇಲ್, ಮುಖಂಡರಾದ ಆರ್ ಎಂ ವಿಶ್ವಾಸ್, ಬಿ.ಕೆ ರವಿ, ನಾಗಮ್ಮ, ನಾಡಗೌಡ್ರು ಪುಟ್ಟರಾಜು, ನಂದಿನಿಕುಮಾರ್, ಶಾಲಿನಿ, ಭವ್ಯ, ಪ್ರಭುಸ್ವಾಮಿ, ಬಿ.ಆರ್.ಸಿ.ಶ್ರೀನಿವಾಸ್, ಬಿ.ಆರ್.ಪಿ.ಬಾಬು, ಮುಖ್ಯಶಿಕ್ಷಕಿ ಪ್ರವಿತ್ರಮ್ಮ, ಶಿಕ್ಷಕ ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.




