ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಂಜನಗೆರೆ ಗ್ರಾಮದಲ್ಲಿನ ಚನ್ನಕೇಶ್ವರ ದೇವಾಲಯಕ್ಕೆ ಪೂಜೆಗೆಂದು ತೆರಳಿದಾಗ ಶಿಥಿಲಾವಸ್ಥೆಯಲ್ಲಿದ್ದ ಗೇಟ್ ಕುಸಿದು ಬಿದ್ದು ನನ್ನ ಪುತ್ರ ಐದು ವರ್ಷದ ಜಿಷ್ಣು ಸಾವನ್ನಪ್ಪಿ 10 ದಿನವಾದರೂ ಶಾಸಕರಾಗಲಿ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವಾಗಲಿ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ ಎಂದು ಮೃತ ಬಾಲಕನ ತಂದೆ ಸಿದ್ದರಾಜು ಅಳಲು ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದು ಮಗುವಿನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಥವಾ ತದನಂತರವಾದರೂ ಜಿಲ್ಲಾಡಳಿತ, ತಾಲೂಕು ಆಡಳಿತ ಅಥವಾ ಶಾಸಕರು ಸೇರಿದಂತೆ ಮತ್ತಾವ ಜನಪ್ರತಿನಿಧಿಯೂ ನನ್ನ ಕುಟುಂಬಕ್ಕೆ ಸಾಂತ್ವನ ಹೇಳಲು ಸಹ ಮುಂದಾಗಿಲ್ಲ ಎಂದು ಅಳಲು ತೋಡಿಕೊಂಡರು.
148 ಕೆ.ಜಿ ತೂಕದ ಗೇಟ್ ಮುಗುವಿನ ಮೇಲೆ ಬಿದ್ದದ್ದರಿಂದ ತಲೆಗೆ ಪೆಟ್ಟುಬಿದ್ದು, ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಆಸ್ಪತ್ರೆಗೆ ಸೇರಿಸಿದಾಗ, ವೈದ್ಯರು ಮಗು ಮೃತವಾಗಿರುವುದನ್ನು ದೃಢ ಪಡಿಸಿದರು. ಶವಾಗಾರಕ್ಕೆ ತಹಸೀಲ್ದಾರ್ ಭೇಟಿ ನೀಡಿ, ಈ ಸಂಬಂಧ ನೋಡುವುದಾಗಿ ಹೇಳಿದ್ದು, ಬಿಟ್ಟರೆ 10 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳುವುದಿರಲಿ, ಸಾಂತ್ವನ ಹೇಳಲೂ ಸಹ ಮುಂದಾಗಿಲ್ಲ ಎಂದು ಕಣ್ಣೀರಿಟ್ಟರು.
ಪೊಲೀಸರ ಅಸಡ್ಡೆ ; ಆರೋಪ
ದೂರು ದಾಖಲಾಗಿದ್ದರೂ ಪೊಲೀಸರು ಸಹ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ, ಬಡವರೆಂದು ಅಸಡ್ಡೆ ತೋರುತ್ತಿದ್ದಾರೆ. ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಘಟನೆ ನಡೆಯದಂತೆ ಕ್ರಮ ವಹಿಸುವಂತಾಗಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮಗುವಿನ ತಾಯಿ ಸುಮಿತ್ರ, ಗ್ರಾಮದ ಸಾಗರ್, ಹರೀಶ್‌ಕುಮಾರ್, ಸಾಕಮ್ಮ, ಸಿ.ಚನ್ನಯ್ಯ ಇದ್ದರು.




