ಮಿಮ್ಸ್ ಸಂಸ್ಥೆಯಲ್ಲಿ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ರೂ. 11.75 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿರುತ್ತದೆ. ಕಾಮಗಾರಿಗಾಗಿ ಹೆಚ್ಚುವರಿ ರೂ. 5.65ಕೋಟಿ ಅಗತ್ಯವಿದ್ದು ಕೂಡಲೇ ಹಣ ಬಿಡುಗಡೆ ಮಾಡಿ ಅತಿ ಶೀಘ್ರವಾಗಿ ಆಸ್ಪತ್ರೆಯನ್ನು ಪಾರಂಭಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ಮಂಡ್ಯನಗರ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 77ನೇ ಸ್ವಾತಂತ್ರ ದಿನೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ 2002 ಉದ್ಘಾಟನೆಗೊಂಡು ಅಂದಿನಿಂದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಮೂಲ ಸೌಕರ್ಯಗಳ ಅವಶ್ಯಕತೆ ಇದ್ದು ರೂ.1.63 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ರೈತ ಸಭಾಂಗಣ ಕಳೆದ 50 ವರ್ಷಗಳಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಪ್ರಮುಖ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ ಭವನದ ರಸ್ತೆ, ಒಳಚರಂಡಿ ವ್ಯವಸ್ಥೆ ಇತರೆ ಮೂಲಭೂತ ಸೌಕರ್ಯಗಳಿಲ್ಲದೆ ದುರಸ್ತಿಯಲ್ಲಿರುತ್ತದೆ. ಮಂಡ್ಯ ರೈತ ಸಭಾಂಗಣವನ್ನು ರೂ.61.50 ಲಕ್ಷಗಳ ವೆಚ್ಚದಲ್ಲಿ ದುರಸ್ತಿ ಪಡಿಸಲಾಗುವುದು. ಅಲ್ಲದೇ ಮದ್ದೂರಿನಲ್ಲಿರುವ ಶಿವಪುರ ಧ್ವಜ ಸತ್ಯಾಗ್ರಹ ಸೌಧವು 1938 ರಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಯೋಧರ ಸ್ಮರಣಾರ್ಥ ನಿರ್ಮಾಣವಾಗಿರುವ ಸ್ವಾತಂತ್ರ್ಯ ಸಮರವನ್ನು ನೆನಪಿಸಿಕೊಳ್ಳುವಂತಹ ಸೌಧವಾಗಿರುತ್ತದೆ. ರೂ.1.10 ಕೋಟಿ ವೆಚ್ಚದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ದುರಸ್ತಿ ಮಾಡಿ ನಿರ್ವಹಣೆ ಮಾಡಲಾಗುತ್ತದೆ ಎಂದು ನುಡಿದರು.
ಜಿಲ್ಲೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ
ಕನ್ನಡನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಸಂರಕ್ಷಿಸುವ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಮಂಡ್ಯ ಜಿಲ್ಲೆಯು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲಿದ್ದು, ಜಿಲ್ಲೆಯ ಎಲ್ಲಾ ಚಿಂತಕರು, ಸಾಹಿತಿಗಳು, ಸಂಘಟನೆಗಳು, ಸಾರ್ವಜನಿಕರ ಆಯೋಜಿಸಲಾಗುವುದು ಎಂದರು.

ನಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಮತ್ತು ಗ್ರಾಮಗಳಿಗೆ ನಿರಂತರ ವಿದ್ಯುತ್ ಸೌಲಭ್ಯವನ್ನು ಪೂರೈಸಲು ಜಿಲ್ಲೆಯ ಹಂಪಾಪುರದಲ್ಲಿ 40 KV ಎನ್ನುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಲು ಚಿಂತಿಸಲಾಗಿದೆ. ಜಿಲ್ಲೆಯ 7 ತಾಲ್ಲೂಕುಗಳ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ದೃಷ್ಠಿಯಿಂದ ಜಲಧಾರೆ ಯೋಜನೆಯಡಿ ರೂ.1,828 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ರೈತ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವೇಶ್ವರಯ್ಯ ನಾಲೆಯ 45 ಕಿ.ಮೀ. ಆಧುನೀಕರಣಕ್ಕೆ ಆಧುನೀಕರಣಕ್ಕೆ ಈಗಾಗಲೇ ರೂ.300 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ರೈತಬಾಂಧವರು ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ನಾಲೆಯ ಆಧುನೀಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಇನ್ನಿತರ ಪ್ರಮುಖ ಯೋಜನೆಗಳಡಿ ಮದ್ದೂರು ತಾಲ್ಲೂಕು ಕೆಮ್ಮಣ್ಣು ನಾಲೆ ಉನ್ನತೀಕರಣಕ್ಕೆ ರೂ 90 ಕೋಟಿ ಹಾಗೂ ಮಳವಳ್ಳಿ ತಾಲ್ಲೂಕಿನ ಹೆಬ್ಬಕವಾಡಿ ಹಾಗೂ ನಿಡಘಟ್ಟ ನಾಲೆ ಉನ್ನತೀಕರಣಕ್ಕೆ ರೂ.100 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ. ಹಾಗೂ ಪೂರಿಗಾಲಿ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ರೂ.500ಕೋಟಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇನ್ನೂ ಹತ್ತು ಹಲವು ಯೋಜನೆ. ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ನಮ್ಮ ಆದ್ಯತೆ ಹಾಗೂ ಬದ್ಧತೆಯಾಗಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಪಾರದರ್ಶಕ ಮತ್ತು ಸ್ಪಂದನಾತ್ಮಕ ಆಡಳಿತದ ಹಿತದೃಷ್ಟಿಯಿಂದ ಹಾಗೂ ಶೀಘ್ರ ಕಡತದ ವಿಲೇವಾರಿಗಾಗಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ E-Office ಅನ್ನು ಆಗಸ್ಟ್ 15 ರಿಂದಲೇ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ನುಡಿದರು.
ಜಿಲ್ಲೆಯಲ್ಲಿ ಪೌತಿ ಖಾತೆ ಆಂದೋಲನ
ಜಿಲ್ಲೆಯಲ್ಲಿ ಸುಮಾರು 15.000 ಕ್ಕೂ ಹೆಚ್ಚು ಪೌತಿ ಖಾತೆಗಳು ಬಾಕಿ ಇರುವುದು ಕಂಡುಬಂದಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಈಗಾಗಲೇ ಇತ್ತೋಲೆ ಹೊರಡಿಸಿರುತ್ತಾರೆ. ಬಾಕಿ ಇರುವ ಇತ್ಯರ್ಥಗೊಳಿಸಲಾಗುವುದು, 15,000 ಪ್ರಕರಣಗಳನ್ನು ಶೀಘ್ರವೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ 75 ಆಯ್ದ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಪ್ರಮುಖ ಯೋಜನೆಗಳಾದ ಆರ್.ಟಿ.ಸಿ ತಿದ್ದುಪಡಿ, ಪೋಡಿ ಮುಕ್ತ ಗ್ರಾಮ ಯೋಜನೆ, ಮಾಶಾಸನ ಯೋಜನೆಗಳು ಸೇರಿದಂತೆ ಕಾರ ಕ್ರಮಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಹುತಾತ್ಮರನ್ನು ಮನತುಂಬಿ ನಮಿಸೋಣ
“ಇಂದಿನ ಮಕ್ಕಳೇ – ಮುಂದಿನ ಜನಾಂಗ” ಎಂಬಂತೆ ನಮ್ಮ ಯುವಶಕ್ತಿಯ ಮೇಲೆ ಅಪಾರ ನಂಬಿಕೆ ಮತ್ತು ಭರವಸೆ ಇಡಬೇಕಾಗುತ್ತದೆ. ಸ್ವಾತಂತ್ರ್ಯದ ದೀವಿಗೆಯನ್ನು ನಮ್ಮ ಕೈಗೆ ಇಟ್ಟು ಹೋದ ಹಲವಾರು ಮಹಾತ್ಮರನ್ನು ಹುತಾತ್ಮರನ್ನು ಮನತುಂಬಿ ನಮಿಸೋಣ ಹಾಗೂ ದೀವಿಗೆಯನ್ನು ಜೋಪಾನವಾಗಿ ಕಾಪಾಡಿಕೊಂಡು ಈ ದೇಶಕ್ಕೆ ಬೆಳಕು ನೀಡುವತ್ತ ಶ್ರಮಿಸೋಣ, ಈ ದೇಶದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕ್ರಿಯಾಶೀಲರಾಗೋಣ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಲುಪಿಸೋಣ ಎಂದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಉಪಸ್ಥಿತರಿದ್ದರು.




