ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೋಟ್ಯಂತರ ಭಾರತೀಯರಿಗೆ ಇಂದಿಗೂ ಸ್ಪೂರ್ತಿಯ ಸೆಲೆಯಾಗಿ, ಉಕ್ಕಿನ ಮಹಿಳೆಯಾಗಿ ಎಲ್ಲರೆದೆಯಲ್ಲಿ ನೆಲೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ಹುತಾತ್ಮ ದಿನದಂದು ಅವರ ಜೀವನ, ಆದರ್ಶಗಳನ್ನು ಹೆಮ್ಮೆಯಿಂದ ಸ್ಮರಿಸುತ್ತಾ, ಗೌರವದಿಂದ ನಮಿಸುತ್ತೇನೆ ಎಂದು ಎಕ್ಸ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ಬಡತನ ನಿರ್ಮೂಲನೆ, ಬ್ಯಾಂಕುಗಳ ರಾಷ್ಟ್ರೀಕರಣ, ಅಣ್ವಸ್ತ್ರ ಪರೀಕ್ಷೆ, ಭೂಸುಧಾರಣಾ ಕಾಯ್ದೆ ಹೀಗೆ ದೇಶದ ಒಳಿತಿಗಾಗಿ ಇಂದಿರಾ ಗಾಂಧಿಯವರು ತೆಗೆದುಕೊಂಡ ದಿಟ್ಟ ನಿಲುವುಗಳು ಭಾರತವನ್ನು ಸಶಕ್ತ, ಸ್ವಾಭಿಮಾನಿ ರಾಷ್ಟ್ರವಾಗಿಸುವಲ್ಲಿ ಸುಭದ್ರ ಅಡಿಪಾಯ ಹಾಕಿಕೊಟ್ಟಿವೆ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಸಾಂಗತ್ಯದಲ್ಲೇ ಬೆಳೆದ ಇಂದಿರಾ ಗಾಂಧಿಯವರು ದೇಶಪ್ರೇಮ, ನಿಸ್ವಾರ್ಥ ಸೇವೆ ಹಾಗೂ ಸಮರ್ಪಣಾಭಾವವನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡವರು. ಬಡತನ, ಅನಕ್ಷರತೆ, ಅಸಮಾನತೆ, ಶೋಷಣೆಗಳ ವಿರುದ್ಧ ಮತ್ತೊಂದು ಸುತ್ತಿನ ಚಳವಳಿ ಆರಂಭಿಸಿ, ಅದರ ಫಲ ಕಾಣುವ ಮೊದಲೇ ಅವರು ಹುತಾತ್ಮರಾದದ್ದು ಬಹುದೊಡ್ಡ ದುರಂತ ಎಂದು ವಿಷಾದಿಸಿದ್ದಾರೆ.




