ಪೋಷಕರು ನಿಗದಿತ ಅವಧಿಯಲ್ಲಿ ವಯಸ್ಸಿಗನುಗುಣವಾಗಿ ತಮ್ಮ ಐದು ವರ್ಷದವರೆಗಿನ ಮಕ್ಕಳಿಗೆ ಲಸಿಕೆ ಹಾಕಿಸಿ, ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಿ ಎಂದು ತಹಶಿಲ್ದಾರ್ ಅಶ್ವಿನಿ ಹೇಳಿದರು.
ಶ್ರೀರಂಗಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಇಂದ್ರಧನುಷ್ ಲಸಿಕೆ ಅಭಿಯಾನ ಕುರಿತು ತಾಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಕೈಜೋಡಿಸಿ ಅಭಿಯಾನ ಯಶಸ್ವಿಗೊಳಿಸಿ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್ ಕೆ ವೆಂಕಟೇಶ್ ಮಾತನಾಡಿ, 3 ಹಂತದಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಾರಣಗಳಿಂದ ಲಸಿಕೆ ವಂಚಿತರಾದ ಮಕ್ಕಳಿಗೆ ಅಗಸ್ಟ್ 7 ರಿಂದ ಅ.12ರ ವರೆಗೆ, ಸೆಪ್ಟಂಬರ್ 11 ರಿಂದ 16 ರವರೆಗೆ , ಅಕ್ಟೋಬರ್ 9 ರಿಂದ 14 ರವರೆಗೆ ತಾಲೂಕಿನಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಮುಖ್ಯವಾಗಿ ಹೈರಿಸ್ಕ್ ಸ್ಥಳಗಳು, ವಲಸೆ ಕಾರ್ಮಿಕರು, ಕಬ್ಬು ಕಟಾವು ಕಾರ್ಮಿಕರ, ಕ್ವಾರೆ ಕೆಲಸಗಾರರು ಇರುವ ಸ್ಥಳಗಳಲ್ಲಿ ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಪತ್ತೆಗಾಗಿ ಸಮೀಕ್ಷೆ ನಡೆಸಲಾಗುತ್ತದೆ ಎಂದರು.

2023 ಡಿಸೆಂಬರ್ ಅಂತ್ಯದ ವೇಳೆಗೆ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಮಾಡಲು ಪಣ ತೊಡಲಾಗಿದ್ದು ಮಗುವಿಗೆ 9ನೇ ತಿಂಗಳು ಹಾಗೂ 16ನೇ ತಿಂಗಳ ಅವಧಿಯಲ್ಲಿ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುತ್ತಿದ್ದು ಪೋಷಕರು ತಮ್ಮ ಮಕ್ಕಳಿಗೆ ದಡಾರ್ ರುಬೆಲ್ಲಾ ಲಸಿಕೆ ಹಾಕಿಸಿ ನಿರ್ಮೂಲನೆಗೆ ಸಹಕರಿಸಿ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಅನಂತರಾಜು, ಶ್ರೀರಂಗಪಟ್ಟಣ ಟೌನ್ ಪೋಲಿಸ್ ಉಪನಿರೀಕ್ಷಕ ಶಿವಲಿಂಗ ದಳವಾಯಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ್ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಆರ್ಬಿಎಸ್ಕೆ ತಂಡದ ವೈದ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.




