ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭದ್ರತಾ ಮಂಡಳಿಯ ಸಭೆಯ ನಂತರ ಮಾಧ್ಯಮ ಗಳೊಂದಿಗೆ ಮಾತನಾಡುತ್ತಾ, ಬಿನ್ ಲಾಡನ್ ಸತ್ತಿದ್ದಾನೆ. ಆದರೆ ಗುಜರಾತಿನ ಕಟುಕ ಇನ್ನೂ ಬದುಕಿದ್ದಾನೆ. ಆತ ಭಾರತದ ಪ್ರಧಾನಿಯಾಗಿದ್ದಾನೆ ಎಂಬ ತೀರಾ ಕೀಳು ಮಟ್ಟದ ಹೇಳಿಕೆ ನೀಡಿದ್ದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಭುಟ್ಟೋ ಪ್ರತಿಕೃತಿ ದಹಿಸಿದರು.
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಿಲಾವಲ್ ಭುಟ್ಟೋ ವಿರುದ್ಧ ಧಿಕ್ಕಾರ ಕೂಗಿ ಆತನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ ಸಿದ್ದರಾಮಯ್ಯ ಮಾತನಾಡಿ ,ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಹಳ ಕೀಳಾಗಿ ಮಾತನಾಡಿ ಅಪಮಾನ ಮಾಡಿದ್ದಾನೆ. ಇಂತಹ ಹಲವಾರು ಭುಟ್ಟೋ ಬಂದರೂ ನಮ್ಮ ಮೋದಿಯವರಿಗೆ ಏನೂ ಮಾಡಲು ಆಗಲ್ಲ ಎಂದು ಕಿಡಿಕಾರಿದರು.
ಚಂದಗಾಲು ಶಿವಣ್ಣ ಮಾತನಾಡಿ, ಪಾಕಿಸ್ತಾನದ ಬಿಲಾವಲ್ ಭುಟ್ಟೋ ಪ್ರಧಾನಿ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಪಾಕಿಸ್ತಾನ ಸರ್ಕಾರ ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವ ಭುಟ್ಟೋನನ್ನು ಸಚಿವ ಸಂಪುಟದಿಂದ ಕಿತ್ತುಹಾಕಬೇಕು.ಇಲ್ಲದಿದ್ದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕರಾದ ಇಂಡುವಾಳು ಸಚ್ಚಿದಾನಂದ, ಬೇಕರಿ ಅರವಿಂದ್, ಸಿ.ಟಿ.ಮಂಜುನಾಥ್, ಟಿ.ಎಸ್.ವಿವೇಕ್, ಶಿವಕುಮಾರ್ ಆರಾಧ್ಯ, ಸಿದ್ದರಾಜುಗೌಡ, ಹರ್ಷ, ಚಾಮರಾಜು, ವಿನೋಬ, ಮರ್ಜಿನಿ ರಮೇಶ್, ಪ.ನಾ.ಸುರೇಶ್, ನಾಗಾನಂದ ಉಪಸ್ಥಿತರಿದ್ದರು.




