Thursday, November 19, 2026

ಪ್ರಾಯೋಗಿಕ ಆವೃತ್ತಿ

ಆಂಧ್ರ ಪ್ರದೇಶದ ಜಗನ್‌ ಮೋಹನ್‌ ರೆಡ್ಡಿ ಅತ್ಯಂತ ಶ್ರೀಮಂತ ಸಿಎಂ : ಮಮತಾ ಬ್ಯಾನರ್ಜಿ ಬಳಿ ಕಡಿಮೆ ಸಂಪತ್ತು

ಭಾರತದ ಮುಖ್ಯಮಂತ್ರಿಗಳಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅತ್ಯಂತ ಶ್ರೀಮಂತರಾಗಿದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ನೀಡಿದೆ.

ಎಡಿಆರ್ ಸಂಸ್ಥೆ ಅಭ್ಯರ್ಥಿಗಳ ಚುನಾವಣಾ ಪ್ರಮಾಣಪತ್ರಗಳ ವಿಶ್ಲೇಷಣೆ ಆಧಾರದ ಮೇಲೆ ವರದಿ ನೀಡಿದ್ದು, ದೇಶದ 30 ಹಾಲಿ ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಅವರ ಒಟ್ಟು ಆಸ್ತಿ 510 ಕೋಟಿ ರೂ. ಇದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಮಾರು 15 ಲಕ್ಷ ರೂ. ಆಸ್ತಿ ಹೊಂದಿದ್ದಾರೆ.

“>ಎಲ್ಲಾ 30 ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿದ ನಂತರ ವರದಿ ನೀಡಲಾಗಿದೆ ಎಂದು ಎಡಿಆರ್ ಮತ್ತು ಚುನಾವಣಾ ಕಾವಲುಪಡೆ ತಿಳಿಸಿದೆ.

ದೇಶದ 28 ರಾಜ್ಯಗಳಲ್ಲಿ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪುದುಚೇರಿಗಳಲ್ಲಿ ಮುಖ್ಯಮಂತ್ರಿಗಳು ಇದ್ದರೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್‌ ಕಾರ್ಯನಿರ್ವಹಿಸುತ್ತಿದ್ದಾರೆ.

30 ಮುಖ್ಯಮಂತ್ರಿಗಳ ಪೈಕಿ 29 (ಶೇ. 97) ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಮುಖ್ಯಮಂತ್ರಿಯು ಸರಾಸರಿ ಆಸ್ತಿ 33.96 ಕೋಟಿ ರೂ. ಎಂದು ಎಡಿಆರ್ ಹೇಳಿದೆ.

30 ಮುಖ್ಯಮಂತ್ರಿಗಳಲ್ಲಿ 13 (ಶೇ. 43) ಮಂದಿ ಕೊಲೆ, ಕೊಲೆ ಯತ್ನ, ಅಪಹರಣ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದಾಗಿ ತಮ್ಮ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣಗಳು ಜಾಮೀನು ರಹಿತ ಅಪರಾಧಗಳಾಗಿದ್ದು, ಐದು ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ವರದಿ ಹೇಳಿದೆ.

ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ (510 ಕೋಟಿ ರೂ.ಗಿಂತ ಹೆಚ್ಚು), ಅರುಣಾಚಲ ಪ್ರದೇಶದ ಪೇಮಾ ಖಂಡು (163 ಕೋಟಿ ರೂ.) ಮತ್ತು ಒಡಿಶಾದ ನವೀನ್ ಪಟ್ನಾಯಕ್ (ರೂ. 63 ಕೋಟಿಗಿಂತ ಹೆಚ್ಚು) ಆಸ್ತಿ ಹೊಂದಿರುವ ಅಗ್ರ ಮೂರು ಮುಖ್ಯಮಂತ್ರಿಗಳು.

ಕನಿಷ್ಠ ಘೋಷಿತ ಆಸ್ತಿ ಹೊಂದಿರುವ ಮೂವರು ಮುಖ್ಯಮಂತ್ರಿಗಳೆಂದರೆ – ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ 15 ಲಕ್ಷ ಕ್ಕೂ ಹೆಚ್ಚು, ಕೇರಳದ ಪಿಣರಾಯಿ ವಿಜಯನ್ 1 ಕೋಟಿಗೂ ಹೆಚ್ಚು ಮತ್ತು ಹರಿಯಾಣದ ಮನೋಹರ್ ಲಾಲ್ 1 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ಹೇಳಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಇಬ್ಬರೂ 3 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿ ಹೇಳಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ