Friday, October 25, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಡಿಜಿ- ಮೆಡ್ ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಮಂಡ್ಯ ಜಿಲ್ಲೆಯ ನಾಗಮಂಗಲರ ತಾಲ್ಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಶುಕ್ರವಾರ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಭಾಗವಹಿಸಿ ಡಿಜಿ-ಮೆಡ್ ಗೆ ಚಾಲನೆ ನೀಡಿದರು.

ಸಂವಾದ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸಿ, ಬೈರಾವೈಕ್ಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಹಾಗೂ ಕಾಲಭೈರವನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.

ತಾಯಿ ಮತ್ತು ತಾಯಿನಾಡನ್ನು ಸದಾ ಗೌರವಿಸಿ ಸೇವೆ ಸಲ್ಲಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ವಿದ್ಯಾರ್ಥಿ ಹಂತದಲ್ಲೇ ಇಂತಹ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಧನಕರ್ ನುಡಿದರು.

ಸಾಮಾಜಿಕ ಮಾಧ್ಯಮಗಳು ಇಂದು ನಿಮ್ಮ ಕೈ ತುದಿಯಲ್ಲೇ ಇರುತ್ತದೆ. ಅವುಗಳನ್ನು ಉತ್ತಮ ಜ್ಞಾನ ಬೆಳಸಿಕೊಳ್ಳಲು ಬಳಸಿಕೊಳ್ಳಿ. ಅಬ್ದುಲ್ ಕಲಾಂರವರ ಕಲ್ಪನೆಯನಂತೆ ಪ್ರತಿಯೊಬ್ಬರೂ ಕನಸು ಕಾಣಬೇಕು ಹಾಗೂ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಗುರಿ ತಲುಪಲು ಪರಿಶ್ರಮ ಹಾಗೂ ಜ್ಞಾನ ಅವಶ್ಯಕ. ಗುರಿ ಮುಟ್ಟುವಾಗ ಕೆಲವೊಮ್ಮೆ ಸೋಲನ್ನು ಅನುಭವಿಸಬೇಕಾಗುತ್ತದೆ. ಸೋಲು ಗೆಲುವಿನ ಮೆಟ್ಟಿಲು ಎಂದು ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂಸ್ಥೆ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಸಾರವನ್ನು ಸಾರುತ್ತಿದೆ. . ಶ್ರೀಮಠ ರಾಜ್ಯದಲ್ಲಿ ಅಷ್ಟೇ ಅಲ್ಲ ವಿದೇಶವು ಸೇರಿದಂತೆ 26 ಶಾಖಾ ಮಠದ ಜೊತೆಗೆ ಬಹಳಷ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಅಂಧ, ಕಿವುಡ, ಹಾಗೂ ವಿಕಲಚೇತನ ಮಕ್ಕಳಿಗೆ ಶಾಲೆಗಳನ್ನು ನಡೆಸುತ್ತಿರುವುದು ಪ್ರಶಂಸನೀಯ ವಿಷಯ ಎಂದರು.

ಪ್ರಜಾಪ್ರಭುತ್ವ ರಾಷ್ಟದಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಬಗ್ಗೆ ತಿಳಿಸಬೇಕಿದೆ. ಇದರಿಂದಾಗಿ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ ಎಂದರು.

ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರನ್ನು ರೈತ ಪ್ರಧಾನಮಂತ್ರಿ ಎಂದ ಅವರು, ದೇವೇಗೌಡರ ಸಾಧನೆಗಳ ಬಗ್ಗೆ ತಿಳಿಸಿದರು‌‌.

ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರು ಮಾತನಾಡಿ, 50 ವರ್ಷಗಳ ಹಿಂದೆ ಡಾ. ಬಾಲಗಂಗಾಧರನಾಥ್ ಸ್ವಾಮೀಜಿ ಅವರು ಗ್ರಾಮೀಣ ಭಾಗದ ಖಾಲಿ ಸ್ಥಳದಲ್ಲಿ ನೀರು ಸಿಗದ ನಾಗಮಂಗಲದ ಈ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಲು ಆದಿಚುಂಚನಗಿರಿಯಂತಹ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು, ಇದು ಅವಿಸ್ಮರಣೀಯ ವಿಷಯ ಎಂದರು.

ವಿದ್ಯಾಭ್ಯಾಸಕ್ಕೆ ಯಾವುದೇ ಜಾತಿ, ಬಡತನ, ಸಿರಿತನದ ಗೋಡೆ ಇಲ್ಲ. ಎಲ್ಲರಿಗೂ ಸಹ ಶಿಕ್ಷಣ ಸಿಗಬೇಕು ಎಂಬುದು ಬಾಲ ಗಂಗಾಧರನಾಥ ಸ್ವಾಮೀಜಿ ಅವರ ಆಶಯವಾಗಿತ್ತು. ಅವರು ಸ್ಥಾಪಿಸಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಈ ಹಿಂದೆ ರಾಷ್ಟ್ರಪತಿ ಅಬ್ದುಲ್ ಕಲಾಂ ರವರು ನಮ್ಮ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದ್ದರು. 20 ವರ್ಷಗಳ ನಂತರ ರಾಷ್ಟ್ರದ ಉಪರಾಷ್ಟ್ರಪತಿಗಳು ಸಂವಾದ ನಡೆಸಲು ಆಗಮಿಸಿದ್ದಾರೆ. ನಮ್ಮ ಸಂಸ್ಥೆಯಲ್ಲಿರುವ ಶೇಕಡ 90ರಷ್ಟು ಮಕ್ಕಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳೆ ಆಗಿದ್ದಾರೆ. ಇಂದಿನ ವೈಜ್ಞಾನಿಕ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಡಿ.ಜಿ.ಮೆಡ್ ಆಪ್ ಬಿಡುಗಡೆಗೊಳಿಸಿದ್ದಾರೆ, ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಬಗ್ಗೆ ತಿಳಿದುಕೊಂಡು ಟೆಕ್ಬೋ ಡಾಕ್ಟರ್ ಗಳಾಗಿ ಹೊರಹೊಮ್ಮಲ್ಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಉಪರಾಷ್ಟ್ರಪತಿ ಪತ್ನಿ ಸುದೇಶ್ ಧನಕರ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!